ಜಗನ್ ಸರ್ಕಾರದಿಂದ ದೇಗುಲಗಳಲ್ಲಿ ಮೀಸಲಾತಿ ಜಾರಿ,

ಅಮರಾವತಿ, ಸೆ. 13: ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಇಂದು ಮತ್ತೊಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮುಜಾರಾಯಿ ಇಲಾಖೆಗೆ ಸೇರಿರುವ ಹಿಂದು ದೇಗುಲಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.

ಆಂಧ್ರಪ್ರದೇಶ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ದೇವಸ್ಥಾನಗಳ ಅರ್ಚಕ, ಆಡಳಿತ ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಶೇ 50ರಷ್ಟು ಮೀಸಲಾತಿ ಸಿಗಲಿದೆ. ಇದರಿಂದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಅವಕಾಶ ಹೆಚ್ಚಳವಾಗಲಿದೆ.

ದೇಗುಲಗಳಲ್ಲಿ ಬ್ರಾಹ್ಮಣೇತರರು ಕೂಡಾ ಉನ್ನತ ಹುದ್ದೆಗೇರುವ ಅವಕಾಶ, ಉದ್ಯೋಗ ಸ್ಥಾನ ಮಾನದಲ್ಲಿ ಸಮಾನತೆಯನ್ನು ಕಲ್ಪಿಸಲು ಜಗನ್ ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ದಿವಂಗತ ಎಂ ಕರುಣಾನಿಧಿ ಅವರು ಇಂಥ ನಿರ್ಣಯವನ್ನು ಕೈಗೊಂಡಿದ್ದರು. 2006ರಲ್ಲಿ 24 ದಲಿತರು ಸೇರಿದಂತೆ 206 ಬ್ರಾಹ್ಮಣೇತರ ಸಮಾಜದ ವಿದ್ಯಾರ್ಥಿಗಳು ಅರ್ಚಕ ಹುದ್ದೆಯ ವ್ಯಾಸಂಗ ಮಾಡಿ ಪಾಸಾಗಿದ್ದರು. ಈ ಪೈಕಿ ಇತ್ತೀಚೆಗೆ ಮಧುರೈ ಮೀನಾಕ್ಷಿ ದೇಗುಲದ ಪ್ರಧಾನ ಅರ್ಚಕರ ಗುಂಪಿನಲ್ಲಿ ದಲಿತರು ಸ್ಥಾನ ಪಡೆಯುವಂತಾಗಿದೆ.

ಟಿಟಿಡಿಯಲ್ಲಿ ಬದಲಾವಣೆ: ಜಗತ್ತಿನ ಶ್ರೀಮಂತ ದೇಗುಲವನ್ನು ನಿರ್ವಹಣೆ ಮಾಡುವ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಯಲ್ಲಿ ಭಾರಿ ಬದಲಾವಣೆಯನ್ನುಜಗನ್ ಆದೇಶದಿಂದ ನಿರೀಕ್ಷಿಸಬಹುದು. ಸದ್ಯ 25 ಮಂದಿ ಸದಸ್ಯರಿದ್ದು, 13 ಮಂದಿ ಮಹಿಳೆಯರು ಮೇಲ್ ಸ್ತರದಜಾತಿಗೆ ಸೇರಿದವರಾಗಿದ್ದಾರೆ. ಇನ್ಮುಂದೆ 13 ಮಂದಿ ಎಸ್ ಸಿ ಹಾಗೂ ಹಿಂದುಳಿತ ವರ್ಗಕ್ಕೆ ಸೇರಿದವರು ಸೇರಲಿದ್ದಾರೆ.

Leave a Comment