ಜಂಬೂಸವಾರಿ ವೀಕ್ಷಕರಿಗೆ ಈ ಬಾರಿ ಟೋಪಿ !

ನೆರಳಿಗೆ ಶಾಮಿಯಾನ ಹಾಕುವ ಬದಲು ಟೋಪಿ ವಿತರಣೆಗೆ ಕ್ರಮ
ಮೈಸೂರು, ಅ.12- ಅರಮನೆ ಮುಂಭಾಗ ಜಂಬೂಸವಾರಿ ವೀಕ್ಷಿಸುವ ಜನರಿಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಗೆ ಅರಮನೆ ಮಂಡಳಿ ಈ ಬಾರಿ ಬ್ರೇಕ್ ಹಾಕಲು ನಿರ್ಧರಿಸಿದೆ. ಈ ಮೂಲಕ ಜಂಬೂಸವಾರಿ ವೀಕ್ಷಿಸಲು ಅರಮನೆ ಒಳಗೆ ಬರುವ ಪ್ರವಾಸಿಗರಿಗೆ ಅರಮನೆ ಮಂಡಳಿ ಬಿಗ್ ಶಾಕ್ ನೀಡಿದೆ.
ಅರಮನೆ ಮುಂದೆ ಶಾಮಿಯಾನ ಹಾಕಿದರೆ, ಅರಮನೆ ಅಂದ ಕೆಡುತ್ತದೆ. ಜೊತೆಗೆ ಅರಮನೆಯ ವಿಹಂಗಮ ನೋಟಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಅರಮನೆ ಮಂಡಳಿ ಈ ಬಾರಿ ಅರಮನೆ ಮುಂಭಾಗ ಶಾಮಿಯಾನ ಹಾಕುವುದನ್ನು ಕೈಬಿಡಲು ನಿರ್ಧರಿಸಿದೆ.
ಪೆಂಡಾಲ್ ಹಾಕುವ ಬದಲು, ಜಂಬೂಸವಾರಿ ನೋಡಲು ಬರುವ ಎಲ್ಲರಿಗೂ ಕ್ಯಾಪ್ ( ಟೋಪಿ) ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅರಮನೆ ವ್ಯೂವ್ ಪಾಯಿಂಟ್ ಸರಿಯಾಗಿ ಕಾಣೋದಿಲ್ಲ ಎಂಬ ಉದ್ದೇಶದಿಂದ ಶಾಮಿಯಾನ ಅಳವಡಿಸುತ್ತಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಶಾಮಿಯಾನದ ನೆರಳಿನಲ್ಲಿ ಆಸನಗಳಲ್ಲಿ ಕುಳಿತು, ನೆಮ್ಮದಿಯಾಗಿ ದಸರಾ ವೀಕ್ಷಣೆ ಮಾಡುವರಿಗೆ ಬಿಸಿಲಿನ ತಾಪ ತಟ್ಟುವುದು ಗ್ಯಾರಂಟಿಯಾಗಿದೆ.
ಈ ಮಾಸದಲ್ಲಿ ಮೈಸೂರು ನಗರದಲ್ಲಿ 27,28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬೇಕಿದ್ದು, ಇದೀಗ 32 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದೆ. ಹೀಗಾಗಿ ಶಾಮಿಯಾನ ರಹಿತ ವ್ಯವಸ್ಥೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಪಾಸ್ ಹೊಂದಿರುವ ವಿವಿಐಪಿಗಳು, ಇನ್ನಿತರರು ಬಸವಳಿದು ಸುಸ್ತಾಗಲಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆ ಮುಂಭಾಗ 25 ಸಾವಿರ ಆಸನಗಳ ವ್ಯವ್ಯಸ್ಥೆಯನ್ನ ಜಿಲ್ಲಾಡಳಿತ ಕಲ್ಪಿಸಿಕೊಡಲಿದೆ. ಆದರೆ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಜಿಲ್ಲಾಡಳಿತ ನೀಡುವ ಟೋಪಿಗೆ ಮೊರೆ ಹೋಗುವುದು ಅನಿವಾರ್ಯವಾಗಲಿದೆ.

Leave a Comment