ಜಂತುಹುಳು ನಿವಾರಣಾ ದಿನಾಚರಣೆ

ಚಳ್ಳಕೆರೆ.ಫೆ.13; ಜಂತುಹುಳುವಿನಿಂದ ಉಂಟಾಗುವ ಹಲವು ಸೋಂಕುಗಳನ್ನು ತಡೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಜಂತುಹುಳು ಕಾಣಿಸಿಕೊಂಡರೆ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ನಿಶಕ್ತಿ, ಊಟ ಸೇರದೆ ಇರುವುದು ಸೇರಿದಂತೆ ಹಲವು ಸಮಸ್ಯೆ ಉಂಟಾಗುತ್ತವೆ. ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಪೋಷಕರು ಮತ್ತು ಶಾಲಾ ಶಿಕ್ಷಕರು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಉಚಿತವಾಗಿ ನೀಡುವ ಮಾತ್ರೆಗಳನ್ನು ಮಕ್ಕಳಿಗೆ ನೀಡಿ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರೇಮಸುಧಾ ಮಾತನಾಡಿ, ತಾಲ್ಲೂಕಿನ ಒಟ್ಟು 94,671 ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 1ರಿಂದ5 ವರ್ಷದ ಒಳಗಿನ ಮಕ್ಕಳಿಗೆ 200ಮಿ.ಗ್ರಾಂ ಮತ್ತು 6ರಿಂದ19 ವರ್ಷದ ಮಕ್ಕಳಿಗೆ 400ಮಿ.ಗ್ರಾಂ ಮಾತ್ರೆಗಳನ್ನು 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಇದರಿಂದ ಮಕ್ಕಳನ್ನು ಕಾಡುವ ಜಂತುಹುಳು ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಸಮರ್ಥರಾಯ, ನಗರಸಭೆ ಉಪಾಧ್ಯಕ್ಷ ಟಿ.ವಿಜಯಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಅದ್ಯಕ್ಷ ರವಿಕುಮಾರ್, ತಹಶೀಲ್ದಾರ್ ಟಿ.ಸಿ.ಕಾಂತರಾಜ, ಬಿಇಒ ವೆಂಕಟೇಶ್, ಹೆಗ್ಗೆರೆ ತಾಯಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಜಣ್ಣ ಇದ್ದರು.

Leave a Comment