ಜಂಗಲ್ ಬುಕ್‌ನ ಮೌಗ್ಲಿ ಹುಡುಗಿ ಪೋಷಕರು ಪತ್ತೆ

ಲಕ್ನೋ, ಏ ೨೧- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾದ ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳ ಕಥೆ ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಇದೀಗ ಮೌಗ್ಲಿ ಹುಡುಗಿ ತಮ್ಮ ಮಗಳು ಎಂದು ಹೇಳಿಕೊಂಡು ದಂಪತಿಯೊಂದು ಮುಂದೆ ಬಂದಿದ್ದಾರೆ.

ಜಂಗಲ್ ಬುಕ್ ನ ಮೌಗ್ಲಿಯಂತೆ ಆಕೆಯನ್ನು ಕೋತಿಗಳು ಸಂರಕ್ಷಿಸಿಲ್ಲ. ಆಕೆ ಎಲ್ಲರಂತೆ ಈ ಸಮಾಜದಲ್ಲೇ ಹುಟ್ಟಿ, ಬೇಡವಾದ ಕೂಸು ಎಂದು ತಿಳಿದು ಬಂದಿತ್ತು. ಆದರೆ
ಬಹ್ರಿಚ್ ಗೆ ಸೇರಿದ ಕಟಾರ್ನಿಘಾಟ್ ಕಾಡಿನಲ್ಲಿ ಈಕೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದಳು. ಪುಟ್ಟ ಫ್ರಾಕ್ ತೊಟ್ಟಿದ್ದ ಆಕೆ ಸುತ್ತಾ ಮುತ್ತಾ ಮಂಗಗಳಿತ್ತು. ಹೆಡ್  ಕಾನ್ಸ್ ಟೇಬಲ್ ಸರ್ವಜೀತ್ ಯಾದವ್ ಅವರು, ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಹುಡುಗಿಯನ್ನು ನೋಡಿ, ರಕ್ಷಿಸಿದ್ದರು.

ನಂತರ ಸುರೇಶ್ ಯಾದವ್ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಳು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ನಿರ್ವಾಣ್ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇದೀಗ ಲಕ್ಷ್ಮೀಪುರ ಕೆಹರಿ ತಾಲೂಕಿನ ದಂಪತಿಗಳು ಈಕೆ ತಮ್ಮ ಮಗಳು ಎಂದು ಹೇಳಿಕೊಂಡು ಮುಂದೆ ಬಂದಿದ್ದು, ಸ್ಥಳೀಯ ಸಿಂಗ್ಹಿ ಠಾಣೆಯಲ್ಲಿ ಇದೀಗ ದೂರು ದಾಖಲಿಸಿದ್ದಾರೆ.

ಕಳೆದ ೨೦೧೨ರ ನವಂಬರ್ ೨೫ರಂದು ತಮ್ಮ ಮಗಳು ಲಕ್ಷ್ಮಿ ಎಂಬ ಮಗಳು ಕಾಣೆಯಾಗಿದ್ದಳು, ಆವಲೇ ಇವಳು ಎಂದು ಹೇಳುತ್ತಿರುವ ದಂಪತಿಗಳು ಡಿಎನ್‌ಎ ಪರೀಕ್ಷೆಗೂ ಮುಂದಾಗಿದ್ದಾರೆ. ಆದರೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಂದೇ ಅವರು ಯಾವುದೇ ದೂರು ದಾಖಲು ಮಾಡಿಲ್ಲ. ಪುಕ್ರಿ ಗ್ರಾಮದ ಮಾಕಾನ ದೇವಿ ಹಾಗೂ ರಾಮ್ ಆಧಾರ್ ಅವರ ದೂರನ್ನು ದಾಖಲಿಸಿಕೊಂಡ ಪೋಲಿಸರು ಬಹ್ರಿಚ್ ಠಾಣೆಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ನಡವಳಿಕೆ ಮಂಗಗಳ ರೀತಿಯಲ್ಲೇ ಇದ್ದು, ನಡೆಯುವುದು, ತಿನ್ನುವುದು ಮಂಗಗಳನ್ನೇ ಹೋಲುತ್ತಿದೆ. ಪ್ರಾಣಿಗಳನ್ನು ಕಂಡಾಗ ಆಕೆ ಓಡಿ ಹೋಗುತ್ತಿದ್ದಾಳೆ. ಆಕೆಗೀಗ ನಡೆದಾಡುವ ತರಬೇತಿ ನೀಡಿದ್ದರೂ ಆಕೆ ನಾಲ್ಕು ಕಾಲಿನಲ್ಲೇ ನಡೆಯುತ್ತಿದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಿ.ಕೆ ಸಿಂಗ್ ಹೇಳಿದ್ದು, ಈಕೆ ಮೌಗ್ಲಿ ಗರ್ಲ್ ಎಂಬ ಸುದ್ದಿ ಹಬ್ಬಲು ಇನ್ನಷ್ಟು ಕಾರಣವಾಗಿತ್ತು.

Leave a Comment