ಛಲಗಾರನ ಛಲ

ಸಾಧಕನಿಗೆ ಛಲ ಬೇಕು ಎನಾದರೂ  ಸಾಧಿಸಬೇಕೆಂದು ಹೊರಟಾಗ ಅದಕ್ಕೆ ಅಂಗವೈಕಲ್ಯತೆವಿರಲಿ ಇನ್ನಾವುದೇ ನ್ಯೂನ್ಯತೆ ಅಡ್ಡಿಯಾಗದು, ಸಾಧಿಸುವ ಛಲ ಇರಬೇಕಷ್ಟೇ ಎಂಬುದನ್ನು ನಿರೂಪಿಸುವ ಚಿತ್ರವೇ ಛಲಗಾರ.

ಎ.ಆರ್. ರವೀಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಛಲಗಾರ  ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದ ಶನಿವಾರ ನಗರದಲ್ಲಿ ನೆರವೇರಿತು. ಫಿಲಂ ಚೇಂಬರ್ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಅಶ್ವಿನಿ ರಾಮ್‌ಪ್ರಸಾದ್ ಈ ಚಿತ್ರದ ಸಿಡಿಗಳನ್ನು ಬಿಡುಗಡೆ ಮಾಡಿದರು.

ತಾಯಿಯ ಪ್ರೀತಿಯ ಆಸರೆಯಲ್ಲಿ ಬೆಳೆದ ಪೋಲಿಯೋ ಪೀಡಿತ ಹುಡುಗ ಯಂಕ ಆಕಸ್ಮಿಕವಾಗಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಮಲತಾಯಿಯ ಧೋರಣೆ, ತಿರಸ್ಕಾರದ ನಡವಳಿಕೆಗಳಿಂದ ಮನನೊಂದ ಯಂಕ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಪ್ರಯತ್ನಿಸಿ ಸ್ವಾವಲಂಬಿಯಾಗುತ್ತಾನೆ. ಅದೇ ರೀತಿ ಊರಿನಲ್ಲಿ ನಡೆದ ಕೆಸರುಗದ್ದೆ ಓಟದಲ್ಲಿ ಭಾಗವಹಿಸಿ ಅದರಲ್ಲಿ ಗೆಲ್ಲುವ ಮೂಲಕ ಇಡೀ ಊರೇ ಹೆಮ್ಮೆ ಪಡುವಂಥ   ಸಾಧನೆ ಮಾಡುತ್ತಾನೆ.ವಿಕಲಚೇತನ ಹುಡುಗನೊಬ್ಬನ ಸಾಧನೆಯ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಕೇಶವಚಂದ್ರ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಚಿತ್ರದಲ್ಲಿ ಯಂಕನ ಪಾತ್ರದಲ್ಲಿ ನಟಿಸಿರುವ ಮನು ಒಬ್ಬ ವಿಕಲಚೇತನ. ಚಿತ್ರಕ್ಕೆ ನೈಜತೆಯ ಸ್ಪಶ ಕಟ್ಟಿಕೊಡಲೆಂದು ನಿರ್ದೇಶಕ ರವೀಂದ್ರ, ಸಮರ್ಥನಂ ವಿಕಲಚೇತನ ಶಾಲೆಯಲ್ಲಿ ಓದುತ್ತಿದ್ದ ಮನು ಎಂಬ ಬಾಲಕನನ್ನು ಕರೆತಂದು,ಆತನಿಗೆ ನಟನೆಯ ಬಗ್ಗೆ ತರಬೇತಿ ಕೊಡಿಸಿ ಆತನಿಂದ ಅಭಿನಯ ತೆಗೆಸುವ ಮೂಲಕ  ಚಿತ್ರವನ್ನು ನೈಜವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಉಮೇಶ ಬಣಕಾರ ಮಾತನಾಡಿ ಎಲ್ಲಾ ಸರಿಯಿರುವ ಕಲಾವಿದರನ್ನೇ ಹಾಕಿಕೊಂಡು ಸಿನಿಮಾ ಮಾಡಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಅಂಗವಿಕಲ ಹುಡುಗನನ್ನು ಇಟ್ಟುಕೊಂಡು ಸಿನಿಮಾ ಚಿತ್ರೀಕರಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ನಿಜವಾದ ಅಂಗವಿಕಲರು ಅವರು, ಈ ಹುಡುಗ ನಿಜವಾದ ಛಲಗಾರ. ಇಂಥಾ ಚಿತ್ರಗಳನ್ನು ಎಲ್ಲಾ ಕಡೆ ಪ್ರದರ್ಶನ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ನಮ್ಮ ಛೇಂಬರ್ ವತಿಯಿಂದ ಈ ಚಿತ್ರಕ್ಕೆ ಯಾವರೀತಿಯ ಬೆಂಬಲ ಬೇಕಾದರೂ ನೀಡಲು ಸಿದ್ದ ಎಂದು ಹೇಳಿದರು.

ಚಿತ್ರದ ನಿರ್ದೇಶಕ ರವೀಂದ್ರ ಮಾತನಾಡುತ್ತ ಈ ಸಿನಿಮಾ ಶುರು ಆಗಿದ್ದೇ ಕೇಶವಚಂದ್ರ ಅವರ ಕಥೆಯಿಂದ. ಕಾಲಿಲ್ಲದ ಹುಡುಗನೊಬ್ಬನನ್ನು ಇಟ್ಟುಕೊಂಡು ಕೆಸರುಗದ್ದೆಯಲ್ಲಿ ಓಡಿಸಿದ್ದೇವೆ. ಚಿತ್ರದಲ್ಲಿ ಆ ಹುಡುಗ ಪ್ಯಾಡ್ ಸಹಾಯವಿಲ್ಲದೇ ನಿಂತಿದ್ದಾನೆ. ಅದಕ್ಕಾಗಿ ಆತ ಸತತ ೩ ದಿನಗಳ ಕಾಲ ಕಷ್ಟಪಟ್ಟಿದ್ದಾನೆ. ನಮ್ಮ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಬರದಿರುವುದು ನೋವಾಗಿದೆ ಎಂದು ಹೇಳಿಕೊಂಡರು.

ಲೇಖಕ ಕೇಶವಚಂದ್ರ ಮಾತನಾಡಿ ಈ ಕಥೆ ಹುಟ್ಟಿದ್ದು ನಮ್ಮ ಮನೆಯಲ್ಲೇ. ಒಬ್ಬ ತಾಯಿಯ ಅತಿಯಾದ ಪ್ರೀತಿಯೇ ಮಗನ ಜೀವನಕ್ಕೆ ಹೇಗೆ ಮುಳುವಾಯಿತು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. ಮಂಜುನಾಥ ಹೆಗ್ಡೆ, ಪದ್ಮಾವಾಸಂತಿ ತಂದೆ-ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಕೃತಿ ಚಿತ್ರಾಲಯಯ ಸಂಸ್ಥೆಯಲ್ಲಿ, ಎಸ್.ಆರ್. ಸನತ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜುನಾಥ್ ಬಿ. ಛಾಯಾಗ್ರಹಣ, ರವಿನಂದನ್ ಜೈನ್ ಸಂಗೀತ, ಕೇಶವ ಚಂದ್ರ ಕಥೆ, ಸಂಭಾಷಣೆ ಮತ್ತು ಸಾಹಿತ್ಯ, ಎಂ. ಮುನಿರಾಜು ಸಂಕಲನ, ಪೂರ್ಣೇಶ್ ಸಾಗರ್ ಚಿತ್ರಕತೆ ಇದೆ.  ಉಳಿದ ತಾರಾಗಣದಲ್ಲಿ ಬೇಬಿ ಪುಣ್ಯ ಕಲ್ಯಾಣಿ,ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ  ಮುಂತಾದವರಿದ್ದಾರೆ.

Leave a Comment