ಚೌಕ

ಹಿರಿಯ ನಟ, ನಿರ್ದೇಶಕ ಹಾಗು ನಿರ್ಮಾಪಕ ದ್ವಾರಕೀಶ್ ಅವರು ಕನ್ನಡ ಚಿತ್ರ ಇತಿಹಾಸದಲ್ಲಿ ತಮ್ಮದೇ ಆದ ಪುಟಗಳನ್ನು ಬರೆದವರು. “ಕನ್ನಡ ಚಿತ್ರ ಅಭಿಮಾನಿಗಳಿಗೆ ಸದಾ ಋಣಿಯಾಗಿದ್ದೇನೆ. ಅವರ ಆಶೀರ್ವಾದ ಬೇಕು ನನ್ಗೆ” ಎಂದೆನ್ನುವ ಅವರ ನಿರ್ಮಾಣದ ಚಿತ್ರ ‘ಚೌಕ’ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೊಂದಿಗಿನ ಮಾತುಗಳಿವು.
* ದ್ವಾರಕೀಶ್ ಪ್ರೊಡಕ್ಷನ್‌ನಲ್ಲಿ  ೫೦ನೇ ಚಿತ್ರವಾಗಿ ‘ಚೌಕ’ ತೆರೆಕಾಣುತ್ತಿರುವುದು ಏನೆನಿಸ್ತಿದೆ?
ಒಂದು ತರಹದಲ್ಲಿ ಖುಷಿ ಇದೆ. ಜೊತೆಗೆ ನೂರು ಚಿತ್ರ ನಿರ್ಮಿಸಲಿಲ್ಲವಲ್ಲಾ ಅನ್ನೋ
ಬೇಜಾರೂ ಇದೆ.
* ಈಗಿನ ಚಿತ್ರ ನಿರ್ಮಾಣ ನಿಮಗೆ ಹೇಗನಿಸುತ್ತೆ?
ಈಗ ಯವ ಜನರೆಲ್ಲಾ ವಿಭಿನ್ನ ಚಿತ್ರಗಳನ್ನು ಕೊಡಬೇಕೆನ್ನುತ್ತಿದ್ದಾರೆ. ಅದೇ ತರಹ ಜನ ಕೂಡ
ವಿಭಿನ್ನ ಚಿತ್ರಗಳನ್ನು ನೋಡ್ತಿದ್ದಾರೆ. ರೆಗ್ಯುಲರ್ ಸಿನೆಮಾಗಳಲ್ಲದೆ ಕಥಾವಾಸ್ತು
ವಿಭಿನ್ನವಾಗಿರುವ ಚಿತ್ರಗಳನ್ನು ಜನ ಇಷ್ಟಪಡ್ತಿದ್ದಾರೆ ಅದು ಖುಷಿಯಾಗುತ್ತೆ. ‘ಚೌಕ’ ಚಿತ್ರದಲ್ಲಿಯೂ ಕಥಾವಸ್ತು ಹೊಸತರನೇ ಇದೆ.
*  ನಿಮಗೇ ‘ಚೌಕ’ದಲ್ಲಿ ಇಷ್ಟವಾದ ಅಂಶಗಳು?
ಹೊಸತನದ ಕಥಾವಸ್ತು, ನಾಲ್ಕು ಜನ ಸ್ಟಾರ್ ಹೀರೋಗಳಿದ್ದಾರೆ, ಐದು ಜನ ಸಂಗೀತ ನಿರ್ದೇಶಕರು, ಐವರು ಲೇಖಕರು ಮತ್ತು ಐದು ಮಂದಿ ಛಾಯಾಗ್ರಾಹಕರು ಕೆಲಸ ಮಾಡಿರುವುದರೊಂದಿಗೆ ಹೊಸ ಪ್ರಯತ್ನವಿದೆ. ನಮ್ಮ ನಿರ್ಮಾಣದ ೫೦ನೇ ಚಿತ್ರವಾಗಿ ‘ಚೌಕ’ ಹೊಸ ಮೈಲಿಗಲ್ಲಾಗಬೇಕು ಅನ್ನೋ ತರಹದಲ್ಲೇ ಪ್ರಯತ್ನ ಮಾಡಲಾಗಿದೆ.
* ‘ಚೌಕ’ದಲ್ಲಿ ನಟಿಸಿದ್ದೀರಲ್ವಾ?
ಇಲ್ಲ ಸುಮ್ಮನೆ ಒಂದು ಶಾಟ್‌ನಲ್ಲಿ ಕಾಣಿಸಿಕೊಂಡಿದ್ದೇನಷ್ಟೇ.
* ಪ್ರಸ್ತುತದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಬೇಕು ಎನಿಸಿಲ್ವಾ?
ಅನಿಸಿದ್ದಿಲ್ಲ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಿದ್ದೇನೆ ನಾನು ಏನು ಮಾಡಿದ್ದೇನೊ ಎಲ್ಲದರ ಬಗ್ಗೆಯೂ ಸಂತೋಷವಿದೆ. ಈಗ ಯುವಜನರು ಬರ್‍ಲಿ ಅವ್ರನ್ನು ನಾನು ನೋಡುವ ಕಾಲವಿದು. ಒಂದ್ ಕಾಲದಲ್ಲಿ ಮಾಡೋಕಾಲ ಈಗ ನೋಡೋ ಕಾಲ.
* ಈಗಿನ ಕನ್ನಡ ಚಿತ್ರರಂಗ ನಿಮಗೆ ಹೇಗನಿಸುತ್ತೆ?
ಚೆನ್ನಾಗಿದೆ ಏನೋ ಮಾಡ್ತಿದ್ದಾರೆ, ಒಳ್ಳೋಳ್ಳೆ ಪ್ರಯತ್ನಗಳನ್ನೂ ಪಡ್ತಿದ್ದಾರೆ, ಹೊಸ ತಲೆಗಳು ಬರ್‍ತಿವೆ, ಹೊಸಹೊಸ ಯೋಚನೆಗಳು ಸಿನೆಮಾಗಳಾಗ್ತಿವೆ, ಹೀರೋಗಳು ಜಾಸ್ತಿ ಇದ್ದಾರೆ. ನಮ್ ಕಾಲದಲ್ಲಿ ಹೀರೋಗಳು ಬಹಳ ಕಡಿಮೆ ಇದ್ರು. ಜಾಸ್ತಿ ಹೀರೋಗಳು ಚಿತ್ರೋದ್ಯಮಕ್ಕೆ ಬೇಕಾಗಿತ್ತು ಈಗ ಇದ್ದಾರೆ.
* ಈಗಿನ ನಾಯಕ ಮತ್ತು ನಾಯಕಿಯರಿಗೆ ಉತ್ತಮ  ಮತ್ತು ಹೆಚ್ಚು ಸಿನೆಮಾಗಳಲ್ಲಿ ನಟಿಸಲು ಆಗ್ತಿಲ್ಲ ಅಲ್ವಾ?
ಯಾಕೇಂದ್ರೆ ಪ್ರತಿ ಸರ್ತಿನೂ ಹೊಸ ತರಹದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ಕಲಾವಿದನನ್ನೇ ಹಾಕಬೇಕೆನ್ನುವುದು ಈಗ ಇಲ್ಲ. ಹೊಸಬರನ್ನು ಹಾಕಿಕೊಂಡು ಆತುರದಲ್ಲಿ ಸಿನೆಮಾಗಳಾಗ್ತಿವೆ. ಇದರಿಂದಾಗಿ ನಾಯಕ-ನಾಯಕಿ ಗಟ್ಟಿಯಾಗಿ ನಿಲ್ಲಲ್ಲು ಆಗ್ತಿಲ್ಲ. ನಮ್ಮ ಕಾಲದಲ್ಲಿ ವರ್ಷಕ್ಕೆ ೨೦ ಅಥವಾ ೩೦ ಚಿತ್ರಗಳ ಬಂದರೆ ದೊಡ್ಡದು ಈಗ ಸುಮಾರು ೨೦೦ ಚಿತ್ರಗಳಾಗ್ತಿವೆ ಎಲ್ಲಿಂದ ಎಲ್ಲಿಗೊ ತಲುಪಿದ್ದೇವೆ. ಆಗ ನಾವು ಕಾಮಿಡಿಯನ್ಸ್ ವರ್ಷಕ್ಕೆ ೫ರಿಂದ ೮ ಚಿತ್ರಗಳಲ್ಲಿ ನಟಿಸಿದರೆ ನಾವು ಬಿಜಿಯೆಸ್ಟ್ ಕಾಮಿಡಿಯನ್ಸ್. ಇವತ್ತಿಗೆ ಚಿತ್ರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರೂ ಕಾಣಿಸ್ತಿಲ್ಲ. ಚಿತ್ರಗಳ ಸಂಖ್ಯೆ ಕಡಿಮೆ ಇದ್ದಾಗ ನಾವುಗಳು ಕಾಣಿಸ್ತಿದ್ವಿ ಈಗ ಹಾಗಿಲ್ಲ ಬಹಳನೇ ಕಷ್ಟ.
* ಈಗಿನ ಹಾಸ್ಯಪ್ರಧಾನ ಚಿತ್ರಗಳ ಅಭಿರುಚಿ ಹೇಗಿದೆ?
ಒಳ್ಳೆ ಹಾಸ್ಯವಿರುವ ಚಿತ್ರಗಳನ್ನು ಕೊಟ್ಟರೆ ಜನ ಯಾವತ್ತೂ ನೋಡ್ತಾರೆ. ಹಾಸ್ಯದ ಅಭಿರುಚಿ ಇವತ್ತಿನದು ನಾಳೆಯದು ಹಿಂದಿನದು ಅಂತಿಲ್ಲ ಯಾವತ್ತಿಗೂ ಹಾಸ್ಯ ಅನ್ನೋದು ಬೇಕೇಬೇಕು ಆದ್ರೆ ಅದು ಉತ್ತಮವಾಗಿರಬೇಕು ಅಷ್ಟೇ. ಜನರು ಮನಸ್ಸಿಗೆ ತಗೋಳೊ ರೀತಿಯಲ್ಲಿ ಹಾಸ್ಯ ಚಿತ್ರಗಳನ್ನು ಮಾಡಬೇಕು ಅಷ್ಟೆ. ಕನ್ನಡ ಜನ ಮೊದಲಿನಿಂದಲೂ ಹಾಸ್ಯಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ ಇಲ್ಲಾಂದರೆ ನಾವೆಲ್ಲಾ ಇರಲು ಸಾಧ್ಯವಿತ್ತಾ?
* ‘ಚೌಕ’ ಚಿತ್ರವಾಗಲು ತುಂಬಾ ನಿಧಾನವಾಯ್ತಾ?
ನಿಧಾನ ಅಂತಾಲ್ಲ ಒಳ್ಳೆ ಸಿನೆಮಾ ಮಾಡಬೇಕೆಂದರೆ ಸಮಯ ತಗೊಳುತ್ತೆ. ಅವಸರದಲ್ಲ ಜಟಾಪಟೀಂತ ಮಾಡೋ ಸಿನೆಮಾ ಅಲ್ಲ ‘ಚೌಕ’. ಚೆನ್ನಾಗಿ ಮಾಡಬೇಕು ಎಲ್ಲಾ ಸ್ಟಾರ್‌ಗಳನ್ನು ಹಾಕಬೇಕೆನ್ನುವುದಿತ್ತು. ದರ್ಶನ್ ಗೌರವ ನಟರಾಗಿ ಪಾತ್ರ ಮಾಡಿರೋದಾಗಲಿ, ಪುನೀತ್ ರಾಜ್‌ಕುಮಾರ್ ಹಾಡುವ ಮೂಲಕ ಸುಮಾರು ೪೦ ವರ್ಷಗಳ ನಂತರ ರಾಜ್‌ಕುಮಾರ್ ಕಟುಂಬದ ಸಂಪರ್ಕ ಮತ್ತೆ ಸಾಧ್ಯವಾಗಿದೆ ಇದರಿಂದ ತುಂಬಾನೇ ಖುಷಿ ಇದೆ. ‘ಭಾಗ್ಯವಂತರು’ ಚಿತ್ರ ನಂತರ ರಾಜ್‌ಕುಮಾರ್ ಕುಟುಂಬದ ಜೊತೆ ಕೆಲಸ ಮಾಡಿರ್‍ಲಿಲ್ಲ ನಾನು. ದ್ವಾರಕೀಶ್ ಅವರ ೫೦ನೇ ಚಿತ್ರ ಅಂತ ಎಲ್ಲರೂ ಮುಂದೆ ಬಂದು ಕೆಲಸ ಮಾಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು.
* ಆಡು ಆಟ ಆಡು ಹಾಡನ್ನು ‘ಚೌಕ’ಕ್ಕೆ ರೀಮಿಕ್ಸ್ ಮಾಡಿ ಬಳಸಲು
ಕಾರಣ?
ಒಳ್ಳೆ ಹಾಡು ಆ ಕಾಲದಲ್ಲಿ ಕಿಶೋರ್ ಕುಮಾರ್ ಹಾಡಿದ್ದರು. ಅದನ್ನು ಚೌಕದಲ್ಲಿ ಬಳಸೋಣ ಅಂತ ಎಲ್ಲರೂ ಅಂದ್ರು. ‘ಆಪ್ತಮಿತ್ರ ಚಿತ್ರದಲ್ಲಿ ಕಾಲವನ್ನು ತಡೆಯೋರು ಯಾರು ಇಲ್ಲ ಹಾಡನ್ನು ಬಳಸಿದ್ದು ಚೆನ್ನಾಗಿ ಹಿಟ್ ಆಯ್ತು. ಅದೇ ತರಹ ಮತ್ತೆ ಯಾಕೆ ಪ್ರಯತ್ನಿಸಬಾರದು ಅಂತ ಆಡು ಆಟ ಆಡು ‘ಚೌಕ’ಕ್ಕೆ ಹಾಕಿದ್ದೇವೆ ಚಿತ್ರದ ಸನ್ನಿವೇಶಕ್ಕೆ ತಕ್ಕ ಹಾಗಿದೆ.
* ದ್ವಾರಕೀಶ್ ಅವರ ಚಿತ್ರ ‘ಚೌಕ’ವನ್ನು ಜನ ಯಾವ
ನಿರೀಕ್ಷೆಯನ್ನಿಟ್ಟುಕೊಂಡು ನೋಡಬಹುದು?
ಒಳ್ಳೆ ಸಿನೆಮಾ ಕೊಟ್ಟಿದ್ದಾರೆ ಎನ್ನುವ ನಿರೀಕ್ಷೆ ಇಟ್ಟುಕೊಂಡು ಬಂದರೆ ಖಂಡಿತಾ ನಿರಾಶೇ ಮಾಡುವುದಿಲ್ಲ. ದ್ವಾರಕೀಶ್ ನಿರ್ಮಾಣದ ಚಿತ್ರಗಳ ಇತಿಹಾಸ ನೋಡಿದರೆ ವೈಯವಿಧ್ಯ ಪೂರ್ಣ ಚಿತ್ರಗಳನ್ನು ಕೊಟ್ಟಿದ್ದೇವೆ ಅದೇ ತರಹ ‘ಚೌಕ’ ಕೂಡ ವಿಭಿನ್ನವಾದ ಚಿತ್ರ.
* ಚಿತ್ರರಂಗದಲ್ಲಿ ಮುಂದಿನ ನಿಮ್ಮ ಹೆಜ್ಜೆ?
ಹೇಗ್ಹೇಗ್ ಬರುತ್ತೋ ಹಾಗ್‌ಹಾಗೆ ಹೋಗೋದಷ್ಟೇ. ನನ್ನ ಮಗ ಯೋಗೀಶ್ ದ್ವಾರಕೀಶ್ ಪ್ರತಿಯೊಂದು ಮಾಡ್ತಿದ್ದಾನೆ ಅವ್ನು ಹೇಗೆ ತಗೊಂಡು ಹೋಗ್ತಾನೋ ಹಾಗೆ ಹೋಗೋದಷ್ಟೆ.
* ಇಂಥ ಸಿನೆಮಾ ಮಾಡಲೇಬೇಕು ಎಂದೆನಿಸಿದ್ದು?
ದ್ವಾರಕೀಶ್ ಬ್ಯಾನರ್‌ನಲ್ಲಿ ಕಾದಂಬರಿ ಆಧಾರಿ ಚಿತ್ರ ಬಂದಿಲ್ಲ ಅನ್ನೋ ಬೇಜಾರಿದೆ. ಅದೊಂದು ಆಗಿದ್ರೆ ಪರಿಪೂರ್ಣ ಅನ್ನಿಸಿರೋದು.
-ಕೆ.ಬಿ. ಪಂಕಜ

Leave a Comment