ಚೌಕಟ್ಟಿನ ಬದುಕು ಸುಂದರ: ಹೆಗ್ಗಡೆ

ಉಡುಪಿ, ಆ.30- ಹಿರಿಯರು ಕೊಟ್ಟ ಸಂಸ್ಕಾರದ ಕೊಡುಗೆಗಳನ್ನು ಯಾವ ಮಾಪನದಿಂದಲೂ ಅಳೆಯಲು ಸಾಧ್ಯವಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಧರ್ಮ ಪಾಲನೆ ಮಾಡಿಕೊಂಡು ಉತ್ತಮ ದಾರಿ ಮತ್ತು ಗುರಿ ಹೊಂದಿದ್ದರೆ ಸಂಸ್ಕಾರವಂತರಾಗಿ ಬಾಳಲು ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪರ್ಕಳ ಸಾರ್ವಜನಿಕ ಶ್ರೀ ಗರ್ಣೇಶೋತ್ಸವ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ನಿನ್ನೆ ನಾಲ್ಕನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಆಕರ್ಷಣೆ ಮತ್ತು ಅವಶ್ಯಕತೆಗಳು ಹೆಚ್ಚಾಗುತ್ತಿರುವಂತೆ ಮನುಷ್ಯ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾನೆ. ಇದರಿಂದ ವೈಯಕ್ತಿಕ ಮತ್ತು ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ. ಭೋಗದ ಜೀವನವಿರಲಿ, ಸಾಮಾನ್ಯ ಜೀವನವೇ ಇರಲಿ ಮನುಷ್ಯನಾದವನು ನಿಯಂತ್ರಣದ ಚೌಕಟ್ಟಿನಲ್ಲಿದ್ದರೆ ಬದುಕು ಸುಂದರವಾಗಿರುತ್ತದೆ ಎಂದರು.
ಸಮಿತಿಯಲ್ಲಿ 50 ವರ್ಷಗಳಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಎಲ್ಲ ಹಿರಿಯರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಶ್ರೀನಿವಾಸ್ ಉಪಾಧ್ಯ ಶುಭಾಶಂಸನೆ ಮಾಡಿದರು. ಜಿ.ಶಂಕರ್ ಫ್ಯಾಮಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ಆದಾನಿ ಯಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವಿಲಾಸ್ ನಾಯಕ್, ರೋಟರಿ ಅಭಿನಂದನ್ ಶೆಟ್ಟಿ, ಉದಯ ಸಮೂಹ ಸಂಸ್ಥೆಯ ರಮೇಶ್ ಬಂಗೇರ, ಉದ್ಯಮಿ ಪ್ರಕಾಶ್ ಶೆಟ್ಟಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ದಿಲೀಪ್ ರಾಜು ಹೆಗ್ಡೆ ಅತ್ರಾಡಿ ಸ್ವಾಗತಿಸಿದರು. ಪದಾಧಿಕಾರಿ ಗಣೇಶ್ ಪಾಟೀಲ್ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ವಂದಿಸಿದರು. ಹರಿಪ್ರಸಾದ್ ಭಟ್ ಹೆರ್ಗಾ ಕಾರ್ಯಕ್ರಮ ನಿರೂಪಿಸಿದರು.

Leave a Comment