ಚೊಚ್ಚಲ ದ್ವಿಶತಕ ಸಿಡಿಸಿ ಇತಿಹಾಸ ಬರೆದ ಮಯಾಂಕ್ ಅಗರ್ವಾಲ್

ವಿಶಾಖಪಟ್ಟಣಂ, ಅ 3 – ಭಾರತ ತಂಡದ ಆರಂಭಿಕ ಬ್ಯಾಟ್ಸ್‌‌ಮನ್ ಮಯಾಂಕ್ ಅಗರ್ವಾಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಭಾರತದ ಎರಡನೇ ಬ್ಯಾಟ್ಸ್‌‌ಮನ್ ಎಂಬ ಸಾಧನೆಗೆ ಭಾಜನರಾದರು.

ಇಲ್ಲಿನ ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಅಜೇಯ 84 ರನ್‌ಗಳಿಂದ ಗುರುವಾರ ಬ್ಯಾಟಿಂಗ್ ಮುಂದುವರಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು  371 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 23 ಬೌಂಡರಿಯೊಂದಿಗೆ 215 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು. 28ರ ಪ್ರಾಯದ ಮಯಾಂಕ್ ಅಗರ್ವಾಲ್ ಅವರು ಇದೀಗ ಕರುಣ್ ನಾಯರ್, ವಿನೋದ್ ಕಾಂಬ್ಳಿ ಹಾಗೂ ದಿಲೀಪ್ ಸರ್‌ದೇಸಾಯಿ ಅವರ ಬಳಿಕ ನಾಲ್ಕನೇ ಬ್ಯಾಟ್ಸ್‌‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕರುಣ್ ನಾಯರ್ 2016ರಲ್ಲಿ ಇಂಗ್ಲೆೆಂಡ್ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ 303 ರನ್ ಗಳಿಸಿದ್ದರು. ವಿನೋದ್ ಕಾಂಬ್ಳಿ 1993ರಲ್ಲಿ ಇಂಗ್ಲೆೆಂಡ್ ವಿರುದ್ಧ 224 ರನ್ ಸಿಡಿಸಿದ್ದರು. ಸರ್‌ದೇಸಾಯಿ ಅವರು 1965ರಲ್ಲಿ  ನ್ಯೂಜಿಲೆಂಡ್ ವಿರುದ್ಧ ಅಜೇಯ 200 ರನ್ ಗಳಿಸಿದ್ದರು.

ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ಅವರು ರೋಹಿತ್ ಶರ್ಮಾ ಅವರ ಜತೆಗೂಡಿ ಮೊದಲನೇ ವಿಕೆಟ್‌ಗೆ 317 ರನ್ ಗಳಿಸಿತ್ತು. ಆ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ 300ಕ್ಕೂ ಹೆಚ್ಚು ರನ್ ಜತೆಯಾಟವಾಡಿದ ಭಾರತದ ಮೂರನೇ ಜೋಡಿ ಎಂಬ ಸಾಧನೆಗೆ ಭಾಜನವಾಗಿತ್ತು.

ದಾಖಲೆಯ ಜತೆಯಾಟದಲ್ಲಿ ರೋಹಿತ್ 176 ರನ್ ಹಾಗೂ ಮಯಾಂಕ್ 137 ರನ್ ಜತೆಯಾಟದ ಕೊಡುಗೆ ನೀಡಿದ್ದರು. 1956ರಲ್ಲಿ ನ್ಯೂಜಿಲೆಂಡ್ ವಿರುದ್ಧ ವಿನೂ ಮಂಕಡ್ ಹಾಗೂ ಪಂಕಜ್ ರಾಯ್ ಜೋಡಿಯು 413 ರನ್ ಸಿಡಿಸಿತ್ತು. ಈ ಜೋಡಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನದ ವಿರುದ್ಧ 2006ರಲ್ಲಿ 410 ರನ್ ಗಳಿಸಿದ್ದ ವಿರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಜೋಡಿ ಇದೆ.

Leave a Comment