ಚೆನ್ನಪಟ್ಟಣದಲ್ಲಿ ಸಿಎಂ ಸ್ಪರ್ಧಿಸಲಿ ; ಮುಖ್ಯಮಂತ್ರಿಗಳಿಗೆ ಹೆಚ್ ಡಿ ಕೆ ಸವಾಲು

ಮೈಸೂರು, ಏ.16- ಚೆನ್ನಪಟ್ಟಣದಲ್ಲಿ ಹೆಚ್.ಎಂ ರೇವಣ್ಣ ಬದಲಾಗಿ ಮುಖ್ಯಮಂತ್ರಿಗಳೇ ಬಂದು ನಿಂತರೂ ಜೆಡಿಎಸ್ ಅಭ್ಯರ್ಥಿ ಗೆಲುವು ಶತ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಾಧಿಸಿದರು.
ಇಂದು ಬೆಳಿಗ್ಗೆ ಖಾಸಗಿ ಹೋಟೆನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್.ಎಂ ರೇವಣ್ಣ ಸ್ಪರ್ಧಿಸುತ್ತಿರುವುದು ಕೇವಲ ನಾಮಕಾವಸ್ಥೆಗೆ ಮಾತ್ರ. ಆಗಾಗಿ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಜನತೆ ಜಿ.ಟಿ ದೇವೇಗೌಡರ ಪರವಾಗಿದ್ದಾರೆ. ಕಳೆದ 5 ವರ್ಷಗಳಿಂದ ದೇವೇಗೌಡರು ಒಳ್ಳೆಯ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮಗಳಿಗೆ ಜನರೇ ಬರುತ್ತಿಲ್ಲ. ಆಗಾಗಿ ಅವರು ಹಣದ ಆಮಿಷ ವೊಡ್ಡಿ ಜನರನ್ನು ಕರೆ ತರುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಸೋಲಿನ ಭೀತಿ ಎದುರಾಗಿದೆ. ಕಷ್ಟ ಕಾಲದಲ್ಲಿ ಕೈ ಹಿಡಿದ ಜನತೆಯನ್ನು ಮರೆತಿರುವ ಸಿದ್ದರಾಮಯ್ಯ ಈಗ ಆ ಜನತೆಯ ಮುಂದೆ ಪುನಃ ಗೆಲ್ಲಿಸುವಂತೆ ಅಂಗಲಾಚುತ್ತಿದ್ದಾರೆ. ಪ್ರಬುದ್ಧ ಮತದಾರರು ಇವರ ನಾಟಕೀಯ ನಡೆಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಚುನಾವಣಾ ಪ್ರಚಾರಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇನ್ನೂ ಒಂದು ವಾರ ಠಿಕಾಣಿ ಹೂಡಿದರೂ ಜನರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ನಿನ್ನೆ ಹಲವಾರು ಹಳ್ಳಿಗಳಿಗೆ ಪ್ರಚಾರಕ್ಕಾಗಿ ಹೋಗಿದ್ದಾಗ ಜನರು ಬಹಳ ಪ್ರೀತಿ ವಿಶ್ವಾಸದಿಂದ ಆದರಿಸಿದ್ದಾರೆ. ನೀವು ನಮಗೆ ಮತ ನೀಡದಿದ್ದರೂ ಪರವಾಗಿಲ್ಲ ಮುಖ್ಯಮಂತ್ರಿಗಳು ಬಂದಾಗ ಅವರ ಸಭೆಗೆ ಹಾಜರಾಗಿ ಎಂದು ಮನವಿ ಮಾಡಿದ್ದೇನೆ. ನಮ್ಮ ಬೆಂಬಲಿಗರಿಗೆ ಯಾವ ರೀತಿಯ ಆಮಿಷವನ್ನು ವೊಡ್ಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಛೇಡಿಸಿದರು.
ಮಾರ್ಬಳ್ಳಿ, ಹುಂಡಿಯಲ್ಲಿ 10ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಿದರು. ಆಗ ಪೊಲೀಸರು ಅವರನ್ನ ಅಲ್ಲಿಂದ ತೆರಳುವಂತೆ ತಾಕೀತು ಮಾಡಿದರು. ಆದರೆ ನಾನೇ ಪೊಲೀಸಿನವರಿಗೆ ಸುಮ್ಮನಿರುವಂತೆ ಹೇಳಿ ಅವರ ಬಾವುಟವನ್ನು ಹಾರಿಸಲಿ ಬಿಡಿ, ಅದರಲ್ಲಿ ತಪ್ಪೇನು ಇಲ್ಲ. ಯಾರಿಗೆ ಮತ ಹಾಕಬೇಕು ಎಂಬುದನ್ನು ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಎಂರಡು ವರ್ಷಗಳ ಹಿಂದೆಯೇ 7 ಜನ ಶಾಸಕರು ನಮ್ಮ ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅವರೇನು ಬಂಡಾಯ ಶಾಸಕರಲ್ಲ. ಅವರೆಲ್ಲಾ ಕಾಂಗ್ರೆಸ್ ಪಕ್ಷದವರು. ಈಗಾಗಲೇ ಅವರಿಗೂ ಟಿಕೇಟ್ ನೀಡಿದ್ದಾರೆ. ಅವರ ಚಟುವಟಿಕೆಗಳನ್ನು ಜನರು ಗಮನಿಸಿದ್ದಾರೆ. ಸಧ್ಯದಲ್ಲೆ ಜನರಿಂದ ತಕ್ಕ ಪಾಠ ಕಲಿಯಲಿದ್ದಾರೆ. ಅವರ ಬಗ್ಗೆ ಚರ್ಚೆ ಅನವಶ್ಯಕ ಎಂದರು.

Leave a Comment