ಚುನಾವಣೆ ಪೂರ್ವ: ಎಚ್ಚೆತ್ತುಕೊಂಡ ಕಾಂಗ್ರೆಸ್ ಬಣ ಪ್ರತಿಷ್ಠೆ

ಕನಕದಾಸ ಜಯಂತಿ: ಪರಸ್ಪರ ಬಲ ಪ್ರದರ್ಶನ
ರಾಯಚೂರು.ನ.06- ವಿಧಾನಸಭೆ ಚುನಾವಣೆ ಪೂರ್ವ ಜಿಲ್ಲಾ ಕಾಂಗ್ರೆಸ್‌ನ ಬಣ ರಾಜಕೀಯ ಪ್ರತಿಷ್ಠೆ ಎಚ್ಚೆತ್ತುಕೊಂಡು ಪರಸ್ಪರರ ಬಲ ಪ್ರದರ್ಶನಕ್ಕೆ ಶ್ರೀ ಕನಕದಾಸ 530ನೇ ಜಯಂತೋತ್ಸವ ವೇದಿಕೆಯಾದ ಅಪರೂಪದ ಘಟನೆ ನಡೆಯಿತು.
ಯಾವುದೇ ಪೂರ್ವ ಯೋಜಿತವಲ್ಲದಿದ್ದರೂ ಜಿಲ್ಲಾ ಕಾಂಗ್ರೆಸ್‌ನ ಮುಖಂಡರ ಬಣ ಪ್ರತಿಷ್ಠೆ ಏಕಾಏಕಿ ಜಾಗೃತಿಗೊಂಡು ಒಂದು ಬಣ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮತ್ತು ಮೆರವಣಿಗೆ ನಂತರ ಸಾರ್ವಜನಿಕವಾಗಿ ಉಪಹಾರಕ್ಕೆ ತೆರಳಿದರೆ, ಮತ್ತೊಂದು ಬಣ ಬೈಕ್ ಱ್ಯಾಲಿ ಮೂಲಕ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿ ` ಸೇರಿಗೆ ಸವಾ ಸೇರು` ಎನ್ನುವ ಬಲ ಪ್ರದರ್ಶನ ನಡೆಯಿತು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಾರ್ವಜನಿಕ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಿ ಚುನಾವಣೆ ಸಿದ್ಧತೆಯಲ್ಲಿ ತೊ‌ಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಎನ್.ಎಸ್.ಬೋಸರಾಜು, ಸಂಸದ ಬಿ.ವಿ.ನಾಯಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮತ್ತು ಗುಂಪಿನ ನಾಯಕರ ಮಧ್ಯೆ ರಾಜಕೀಯ ಪ್ರತಿಷ್ಠೆ ತೀವ್ರಗೊಂಡು, ಪ್ರತ್ಯೇಕ ಚಟುವಟಿಕೆಗಳ ಮೂಲಕ ಸವಾಲಿಗೆ ಪ್ರತಿ ಸವಾಲು ಎನ್ನುವಂತೆ ಬಣ ಬುಸುಗುಟ್ಟಿತ್ತಿವೆ.
ಕಳೆದ ನಾಲ್ಕು ವರ್ಷಗಳಿಂದ ನಗರದ ವಿಧಾನಸಭೆ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಕಾಂಗ್ರೆಸ್ ಮುಖಂಡರು ಈಗ ಏಕಾಏಕಿ ನಾಗರಿಕರ ಮಧ್ಯದಲ್ಲಿ ಉಪಹಾರ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಮುಂದಾಗಿರುವುದು ನಗರ ವಿಧಾನಸಭೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಎನ್ನುವುದು ರಹಸ್ಯವೆನಲ್ಲ. ಒಂದು ಬಣದ ಈ ರಾಜಕೀಯ ಮೇಲಾಟಕ್ಕೆ ಮತ್ತೊಂದು ಬಣ ತನ್ನ ಶಕ್ತಿ ಸಾಮರ್ಥ್ಯ ವಿರೋಧಿ ಬಣಕ್ಕೆ ತಿಳಿಸಲು ಸೆಡ್ಡು ಹೊಡೆದು ಮೈದಾನಕ್ಕಿಳಿಯುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ.
ಕನಕ ಜಯಂತಿ ಕಾಂಗ್ರೆಸ್ ಬಣ ಪ್ರತಿಷ್ಠೆಗೆ ಪ್ರಥಮ ವೇದಿಕೆಯಾಗಿದೆ. ಎನ್.ಎಸ್.ಬೋಸರಾಜು ಅವರ ಬಣ ಕನಕದಾಸರ ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಬಸ್ ನಿಲ್ದಾಣದ ಮುಂದೆ ಖಾಸಗಿ ಹೋಟೆಲ್‌ನಲ್ಲಿ ಬೋಸರಾಜು, ಬಿ.ವಿ.ನಾಯಕ ಸೇರಿದಂತೆ ಅನೇಕರು ಉಪಹಾರ ಸೇವಿಸಿದರು. ಕಾಂಗ್ರೆಸ್ ಮುಖಂಡರ ಈ ಹೊಸ ವಿದ್ಯಮಾನ ಹೋಟೆ‌ಲ್‌ನ ಶಾಶ್ವತ ಗ್ರಾಹಕರಲ್ಲಿ ಅಚ್ಚರಿಯಿಂದ ನೋಡುವಂತೆ ಮಾಡಿತು.
ಮತ್ತೊಂದೆಡೆ ಎ.ವಸಂತಕುಮಾರ ಅವರ ಬಣ ಇದೇ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬೈಕ್ ಱ್ಯಾಲಿ ಮೂಲಕ ಕನಕವೃತ್ತಕ್ಕೆ ಮಾಲಾರ್ಪಣೆ ಮಾಡಿರುವುದು ಗಮನಾರ್ಹವಾಗಿದೆ. ಈ ಎರಡು ಬೆಳವಣಿಗೆ ಗಮನಿಸಿದ ರಾಜಕೀಯ ಆಸಕ್ತರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕನಕದಾಸ ಜಯಂತೋತ್ಸವ ಆಚರಣೆಯಲ್ಲಿ ತೊ‌ಡಗಿದ ಕೆಲವರಿಗೆ ಕಾಂಗ್ರೆಸ್‌ನ ಬಣ ಪ್ರತಿಷ್ಠೆ ಚರ್ಚೆಗೆ ಗ್ರಾಸವಾಯಿತು.
ಚುನಾವಣೆ ವೇಳೆಗೆ ವಿರೋಧ ಪಕ್ಷಗಳ ಬಲಾಬಲ ಪ್ರದರ್ಶನದೊಂದಿಗೆ ಕಾಂಗ್ರೆಸ್‌ನ ಎನ್.ಎಸ್.ಬೋಸರಾಜು ಮತ್ತು ಎ.ವಸಂತಕುಮಾರ ಬಣದ ಶಕ್ತಿ ಪ್ರದರ್ಶನ ನಗರ ವಿಧಾನಸಭೆ ಕ್ಷೇತ್ರದಲ್ಲಿ ಯಾವ ರೀತಿಯ ಬೆಳವಣಿಗೆಗೆ ದಾರಿಗಳಾಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

Leave a Comment