ಚುನಾವಣೆ ಎದುರಿಸುವುದು ಒಳಿತು: ಸಚಿವ ಶಿವಶಂಕರ್ ರೆಡ್ಡಿ

ಬೆಂಗಳೂರು, ಜುಲೈ 11: ಸದ್ಯದ ರಾಜ್ಯ ರಾಜಕಾರಣದ ಪರಿಸ್ಥಿತಿಯನ್ನು ಗಮನಿಸಿದಾಗ ಸರ್ಕಾರವು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಲೇಸು ಎಂದು ದೋಸ್ತಿ ಸರ್ಕಾರದ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿರುವ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.

ಅತೃಪ್ತ ಶಾಸಕರು ರಾಜೀನಾಮೆ ಹಿಂದಕ್ಕೆ ಪಡೆಯುವ ಸಂಭವ ಕಡಿಮೆ. ಹೀಗಾದರೆ ಸರ್ಕಾರ ಬಹುಮತ ಕಳೆದುಕೊಂಡು ಅಲ್ಪಮತಕ್ಕೆ ಬಿದ್ದುಹೋಗುತ್ತದೆ. ಇದರಿಂದ ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂರುವ ಸ್ಥಿತಿ ಎದುರಾಗುತ್ತದೆ ಎಂದು ಅವರು ಹೇಳಿದರು.

ಈ ರೀತಿಯ ಸನ್ನಿವೇಶವನ್ನು ಎದುರಿಸುವ ಬದಲು ಚುನಾವಣೆಗೆ ಹೋಗುವುದು ಸೂಕ್ತ. ನಾವು ಚುನಾವಣೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.

ಗೌರಿಬಿದನೂರು ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿರುವ ಶಿವಶಂಕರ್ ರೆಡ್ಡಿ ಅವರು ದೋಸ್ತಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

Leave a Comment