ಚುನಾವಣೆಗಾಗಿ ಹಣ ಸಂಗ್ರಹ: ಸಿಎಂ, ಕೃಷ್ಣ ಬೈರೇಗೌಡ ರಾಜೀನಾಮೆಗೆ ಆಗ್ರಹ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೧೫- ಸರ್ಕಾರಿ ಅಧಿಕಾರಿಗಳಿಂದ ಚುನಾವಣೆಗಾಗಿ ಈ ಸಮ್ಮಿಶ್ರ ಸರ್ಕಾರದಲ್ಲಿ ಹಣ ಸಂಗ್ರಹಣೆ ನಡೆದಿದೆ. ಐಟಿ ದಾಳಿ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಹಣ ಪತ್ತೆಯಾಗಿರುವುದು ಈ ಸಮ್ಮಿಶ್ರ ಸರ್ಕಾರ 20 ಪರ್ಸೆಂಟ್ ಸರ್ಕಾರ ಎಂದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಅಧಿಕಾರಿಗಳ ಬಳಿ ಸಿಕ್ಕಿರುವ ಹಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಕೃಷ್ಣಭೈರೇಗೌಡ, ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಜವಾಬ್ದಾರಿ ಆಗುತ್ತಾರೆ ಎಂದರು.

ಚುನಾವಣೆಗಾಗಿ ರಾಹುಲ್‌ಗಾಂಧಿ ಕಾರ್ಯಕ್ರಮಗಳಿಗೆ ಹಾಗೂ ದೆಹಲಿಯ ವರಿಷ್ಠರಿಗೆ ಹಣ ಕಳುಹಿಸಲು ಅಧಿಕಾರಿಗಳಿಂದ ಸಂಗ್ರಹಿಸಿದ್ದ ಹಣ ಐಟಿ ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಹೇಳಿರುವ ಯಡಿಯೂರಪ್ಪ, ಅಧಿಕಾರಿಗಳಿಂದ ಹಣ ಸಂಗ್ರಹಣೆ ಆರಂಭಿಸಿರುವುದು ಅಕ್ಷಮ್ಯ ಅಪರಾಧ. ಸಚಿವ ಕೃಷ್ಣಭೈರೇಗೌಡ ಹಾರಿಕೆಯ ಉತ್ತರ ಕೊಡದೆ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಡಾಲಱ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡದ ಅವರು, ಅಧಿಕಾರಿಗಳೇ ಹೋಟೆಲ್‌ನಲ್ಲಿ ರೂಂ ಮಾಡಿಕೊಂಡು ಹಣ ಸಂಗ್ರಹಣೆ ಮಾಡುತ್ತಿದ್ದಾರೆ ಎಂದಾದರೆ ಸರ್ಕಾರ ನಡೆಸುತ್ತಿರುವವರಿಗೆ ಮಾನ ಮರ್ಯಾದೆ ಇದೆಯೇ ಎಂದು ಯಡಿಯೂರಪ್ಪ ಹೇಳಿ, ತಪ್ಪಿಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದರು.

ಶ್ರೀನಿವಾಸ್‌ಪ್ರಸಾದ್ ಸ್ಪರ್ಧೆ

ಚಾಮರಾಜನಗರ ಕ್ಷೇತ್ರದಿಂದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರೇ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯವಿದೆ. ಚುನಾವಣೆಗೆ ನಿಲ್ಲಲು ಇಷ್ಟವಿರಲಿಲ್ಲ ಅವರು ಸ್ಪರ್ಧಿಸಿದರೆ ಗೆಲುವು ಸುಲಭ ಎಂದು ಅವರು ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿದ್ದೇ ಅವರೇ ಚಾಮರಾಜನಗರ ಅಭ್ಯರ್ಥಿಯಾಗಬಹುದು ಎಂದು ಹೇಳಿದರು.

ಈ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮಲ್ಲಿಕಾರ್ಜುನಖರ್ಗೆ ಅವರನ್ನು ನೇಮಕ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿ ಒಪ್ಪಲಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು ಎಂದು ಸಮ್ಮಿಶ್ರ ಸರ್ಕಾರ ಮಾಡಿದಾಗಲೇ ಹೇಳಬೇಕಿತ್ತು. ಅದು ಬಿಟ್ಟು ಇಷ್ಟು ದಿನ ಆದ ಮೇಲೆ ಈ ವಿಚಾರ ಎತ್ತುತ್ತಿರುವ ದೇವೇಗೌಡರ ಹಿಂದೆ ಏನಿದೆ ಎಂಬುದು ಜನರಿಗೆ ಗೊತ್ತಿದೆ. 9 ತಿಂಗಳು ಸುಮ್ಮುನಿದ್ದು ಈಗ ದೇವೇಗೌಡರು ಚುನಾಣೆಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪರಿಶಿಷ್ಟ ಜಾತಿ ವರ್ಗದ ಮತ ಸೆಳೆಯಲು ದೇವೇಗೌಡರು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಸೋನಿಯಾಗಾಂಧಿ ಅವರು ಒಪ್ಪಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಅಷ್ಟೇ. ತಮಗಾದ ಹಿನ್ನಡೆಯನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡುವ ಹೇಳಿಕೆ ಎಂದು ಟೀಕಿಸಿದರು.

ಖರ್ಗೆ ಅವರಿಗೆ ಏನೋ ದೊಡ್ಡ ಉಪಕಾರ ಮಾಡಲು ಹೊರಟಿದ್ದೇ ಎಂದು ತೋರಿಸುವ ನಾಟಕೀಯ ಹೇಳಿಕೆ ದೇವೇಗೌಡರದ್ದು, ದೇವೇಗೌಡರನ್ನು ಸಾಮಾನ್ಯ ವ್ಯಕ್ತಿಗಳು ನಂಬಲ್ಲ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಅಭ್ಯರ್ಥಿ ವಿಚಾರ ಇನ್ನೂ ಅಂತಿಮವಾಗಿಲ್ಲ. ಸುಮಲತಾ ಅವರು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಸುಮಲಾತ ಅವರ ನಿರ್ಧಾರ ತಿಳಿಸಿದ ಬಳಿಕ ಬಿಜೆಪಿ ಈ ಕ್ಷೇತ್ರದ ಬಗ್ಗೆ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದರು.

ವಿಜಯೇಂದ್ರ ಹೇಳಿಕೆ

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್‌ಗಳು ಹಣ ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೃಷ್ಣಭೈರೇಗೌಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಗಾಗಿ ಈ ಅಧಿಕಾರಿ ಹಣ ಸಂಗ್ರಹಣೆ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ. ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು “10 ಪರ್ಸೆಂಟ್” ಸರ್ಕಾರ ಎಂದಿದ್ದರು. ಮೈತ್ರಿ ಸರ್ಕಾರ ಈಗ 20 ಪರ್ಸೆಂಟ್ ಸರ್ಕಾರ ಆಗಿದೆ ಎಂದು ವ್ಯಂಗ್ಯವಾಡಿದರು.

ಶ್ರೀನಿವಾಸಪ್ರಸಾದ್ ಭೇಟಿ

ಇದಕ್ಕೂ ಮೊದಲು ಮಾಜಿ ಸಚಿವ ಶ್ರೀನಿವಾಸ್‌ಪ್ರಸಾದ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸಪ್ರಸಾದ್, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ ಎಂದಿದ್ದೆ ಆದರೆ ಎಲ್ಲರೂ ಒತ್ತಡ ಹೇರುತ್ತಿದ್ದಾರೆ. ಯಡಿಯೂರಪ್ಪನವರ ಜತೆ ಈ ಸಂಬಂಧ ಚರ್ಚೆ ನಡೆಸಿದ್ದೇನೆ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದರು.

Leave a Comment