ಚುನಾವಣಾ ಕಣಕ್ಕಿಳಿಯಲಿರುವ ಹಿಂದೂ ಮಹಾಸಭಾ

ಕಲಬುರಗಿ ಏ21:ಅಖಿಲ ಭಾರತ ಹಿಂದೂ ಮಹಾಸಭಾ ಸಂಘಟನೆಯು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನುಕಣಕ್ಕಿಳಿಸಲಿದೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 60 ಸ್ಥಾನದಲ್ಲಿ ಹಿಂದೂ ಮಹಾಸಭಾದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು,ಜೂನ್ ತಿಂಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವದು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಉಪಾಧ್ಯಕ್ಷ ದಿನಕರರಾವ ಕುಲಕರ್ಣಿ ಅಷ್ಟಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದೂ ಇಲ್ಲದಂತಾಗಿದ್ದು, ಇಂತಹ ಸರಕಾರವನ್ನು ಎಚ್ಚರಿಸಬೇಕಾದ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷವು ಸಮಯ ವ್ಯರ್ಥ ಮಾಡುತ್ತ ಕಾಲ ಕಳೆಯುತ್ತಿದೆ.ಬಜೆಟ್‍ನಲ್ಲಿ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕಿದ ರಾಜ್ಯ ಸರಕಾರ ಅಲ್ಪ ಸಂಖ್ಯಾತರನ್ನು ತುಷ್ಠೀಕರಣ ಮಾಡಲು ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ ಧನಸಹಾಯ ಮಾಡಲು ಮುಂದಾಗಿದೆ.ಎಂದು ಟೀಕಿಸಿದರು.
ಇತ್ತೀಚಿಗೆ ಮಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಪಿಎಫ್‍ಐ ಎಂಬ ಸಂಘಟನೆಯ ದುರ್ವರ್ತನೆ ಖಂಡನೀಯ ಎಂದ ಅವರು ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.
ಅಧಿಕಾರಕ್ಕಾಗಿ ಭಗವಾನ ಶ್ರೀರಾಮನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವದು ಸರಿಯಲ್ಲ.ಕೇಂದ್ರ ಸರಕಾರ ಲೋಕಪಾಲ ಮಸೂದೆ ಜಾರಿ ಮಾಡಲು ವಿಫಲವಾಗಿದೆ.ಇದು ತಮಗೆ ತಿರುಗು ಬಾಣವಾಗುವ ಭೀತಿ ಕಾಡುತ್ತಿರಬಹುದು.ಕಾಶ್ಮೀರದ ವಿಶೇಷ ಅಧಿಕಾರ ರದ್ದು ಮಾಡುವ ಭರವಸೆಯನ್ನು ಕೇಂದ್ರ ಸರಕಾರ ಮರೆತಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಪ್ಪುಹಣ ತಡೆಯುವಲ್ಲಿ ಮಾಡಿದ ನೋಟು ರದ್ದು ಪ್ರಕ್ರಿಯೆ ಒಂದು ದಿಟ್ಟ ಕ್ರಮ ಎಂದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುನಂದಾ ಹಿರೇಗಂಗೂರ ಉಪಸ್ಥಿತರಿದ್ದರು

Leave a Comment