ಚುಂಚನಗಿರಿ ಕ್ಷೇತ್ರದ ಬೆಳವಣಿಗೆಗೆ ಡಾ.ಬಾಲಗಂಗಾಧರನಾಥಸ್ವಾಮೀಯವರ ಕೊಡುಗೆ ಅಪಾರ

ಕೆ.ಆರ್.ಪೇಟೆ, ಜ.19- ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಆದಿಚುಂಚನಗಿರಿ ಶ್ರೀಕ್ಷೇತ್ರದ ಭೈರವೈಕ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 74ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನ ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಸಸಿಗಳನ್ನು ವಿತರಣೆ ಮಾಡುವ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸರ್ಕಾರಿ ಆಸ್ಪತ್ರೆಯ ಮುಂದೆ ಹಣ್ಣು ಹಂಪಲು ಮತ್ತು ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗನ್ನಾಥ್ ಅವರು ಚುಂಚನಗಿರಿ ಕ್ಷೇತ್ರದ ಬೆಳವಣಿಗೆಗೆ ಡಾ.ಬಾಲಗಂಗಾಧರನಾಥಸ್ವಾಮೀಯವರ ಕೊಡುಗೆ ಅಪಾರವಾಗಿದೆ. ವಿಶ್ವದಾದ್ಯಂತ ಸುಮಾರು 450ಕ್ಕೂ ಹೆಚ್ಚು ಆದಿಚುಂಚನಗಿರಿ ಶಾಖಾ ಮಠಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಶ್ರೀಗಳು ಹಣ ಗಳಿಸುವ ಆಸೆ ಇದ್ದರೆ ನಗರ ಪ್ರದೇಶಗಳಲ್ಲಿ ಹೈಟೆಕ್ ಶಾಲೆಗಳನ್ನು ತೆರೆಯಬಹುದಿತ್ತು ಆದರೆ ಅವರಿಗೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ ಬಗ್ಗೆ ಹೆಚ್ಚು ಕಾಳಜಿ ಇತ್ತು ಹಾಗಾಗಿ ತಾವು ತೆರೆದಿರುವ ಶೇ.80ಕ್ಕೂ ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಮಗಿದ್ದ ಕಾಳಜಿಯನ್ನು ತೋರಿಸಿಕೊಟ್ಟಿದ್ದರು. ಹಳ್ಳಿ ಹಳ್ಳಿಯನ್ನು ಸುತ್ತಿ ಭಕ್ತರಿಂದ ಕಾಣಿಕೆ ಸ್ವೀಕರಿಸಿ ಆದಿಚುಂಚನಗಿರಿ ಕ್ಷೇತ್ರವವನ್ನು ಸುಂದರವಾಗಿ ಕಟ್ಟಿದರು. ಶ್ರೀ ಕ್ಷೇತ್ರದಲ್ಲಿ ಬಡಮಕ್ಕಳಿಗೆ ಉಚಿತರ ಶಿಕ್ಷಣ ನೀಡುವ ಶಾಲೆಯನ್ನು ಆರಂಭಿಸಿದರು. ಇಂದಿಗೂ ಸಾವಿರಾರು ಬಡಮಕ್ಕಳು ಉಚಿತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಚುಂಚಶ್ರೀಗಳು ಇದರಿಂದಾಗಿ ಗ್ರಾಮೀಣ ಭಾಗದ ರೈತರ, ಧೀನ ದಲಿತ, ಅಲ್ಪಸಂಖ್ಯಾತರ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಚುಂಚನಗಿರಿ ಶಾಲಾ-ಕಾಲೇಜುಗಳಲ್ಲಿ ಕಲಿಕೆ ಲಕ್ಷಾಂತರ ಮಂದಿ ಉತ್ತಮ ಸ್ಥಾನ-ಮಾನ ಗಳಿಸಲು ಸಾಧ್ಯವಾಗಿದೆ ಎನ್ನುವ ಅತ್ಯಂತ ಶ್ಲಾಘನೀಯವಾದುದು ಎಂದು ಡಾ.ಜಗನ್ನಾಥ್ ಹೇಳಿದರು.
ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ, ಹೇಮಗಿರಿ ಶಾಲೆಯ ಆರ್.ಓ. ಸುರೇಶ್, ರಾಮಚಂದ್ರು, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ತಜ್ಞ ವೈದ್ಯೆ ಡಾ.ಅಖಿಲಾ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ವೃಂದದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಗನ್ನಾಥ್ ಅವರಿಗೆ ಶ್ರೀಗಳ ಹುಟ್ಟು ಹಬ್ಬದ ಅಂಗವಾಗಿ ಸಸಿಗಳನ್ನು ಕೂಡ ವಿತರಣೆ ಮಾಡಲಾಯಿತು.

Leave a Comment