ಚೀನೀ ನಿರ್ಮಿತ ಸೇತುವೆ ಉದ್ಘಾಟನೆ – ಭಾರತ ಬಹಿಷ್ಕಾರ

ನವದೆಹಲಿ, ಸೆ. ೨- ಚೀನಾದ ಆರ್ಥಿಕ ನೆರವು ಮತ್ತು ಸಹಕಾರದೊಂದಿಗೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಿರ್ಮಾಣ ಮಾಡಿರುವ ಸೇತುವೆಯ ಉದ್ಘಾಟನಾ ಸಮಾರಂಭಕ್ಕೆ ಭಾರತ ಬಹಿಷ್ಕಾರ.

ಏಷ್ಯಾ ರಾಷ್ಟ್ರಗಳ ರಾಜತಾಂತ್ರಿಕರನ್ನು ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಎಮೀನ್‌ ಅವರ ಭದ್ರತಾ ಸಿಬ್ಬಂದಿ ತುಚ್ಯವಾಗಿ ನಡೆಸಿಕೊಂಡ ಹಿನ್ನೆಲೆಯಲ್ಲಿ ಈ ಸಮಾರಂಭಕ್ಕೆ ಗೈರು ಹಾಜರಾಗಲು ಭಾರತ ತೀರ್ಮಾನಿಸಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ಆದರೆ, ನೆರೆಯ ಹಾಗೂ ಮಿತ್ರರಾಷ್ಟ್ರವಾದ ಮಾಲ್ಡೀವ್ಸ್‌ನಲ್ಲಿ ಚೀನಾ ತಳವೂರುವುದಕ್ಕೆ ಭಾರತ ತನ್ನ ವಿರೋಧವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದೆ ಎಂದೂ ಭಾರತದ ಗೈರುಹಾಜರಿಯನ್ನು ವಿಶ್ಲೇಷಿಸಲಾಗಿದೆ.

ಭಾರತದ ಈ ಬಹಿಷ್ಕಾರದಿಂದ ಏಷ್ಯಾದ 2 ಅತಿ ದೊಡ್ಡ ರಾಷ್ಟ್ರಗಳಾದ ಭಾರತ ಮತ್ತು ಚೀನಾದ ನಡುವೆ ಇನ್ನಷ್ಟು ವೈಷಮ್ಯ ಉಂಟಾಗುವ ಸಾಧ್ಯತೆಗಳು ಇವೆ.

ರಾಜಧಾನಿ ಮಾಲೆ ಮತ್ತು ವಿಮಾನ ನಿಲ್ದಾಣ ದ್ವೀಪದ ನಡುವೆ 1.4 ಕಿ.ಮೀ ದೂರದ ಸೇತುವೆಯನ್ನು ಬಹುಪಾಲು ಚೀನಾದ ಹಣದಲ್ಲಿಯೇ ನಿರ್ಮಾಣ ಮಾಡಲಾಗಿದೆ. ಭಾರತದ ನೆರೆಯ ರಾಷ್ಟ್ರಗಳಲ್ಲಿ ಮೂಲ ಸೌಕರ್ಯ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿಯೇ ಚೀನಾ ಈ ಸೇತುವೆಗಾಗಿ 116 ದಶಲಕ್ಷ ಡಾಲರ್ ಹಣ ನೀಡಿದೆ ಹಾಗೂ 72 ದಶಲಕ್ಷ ಸಾಲವನ್ನೂ ಮಾಲ್ಡೀವ್ಸ್‌ಗೆ ನೀಡಿದೆ.

ಉದ್ಘಾಟನಾ ಸಮಾರಂಭದ ವೇದಿಕೆವರೆವಿಗೂ ಚೀನಾದ ರಾಯಭಾರಿಗೆ ಕಾರಿನಲ್ಲೇ ಹೋಗಲು ಅವಕಾಶ ಮಾಡಿಕೊಟ್ಟಿದ್ದ ಅಧ್ಯಕ್ಷ ಎಮೀನ್ ಅವರ ಭದ್ರತಾಸಿಬ್ಬಂದಿ ಇತರ ಏಷ್ಯಾ ರಾಜತಾಂತ್ರಿಕರನ್ನು ದೂರದಲ್ಲಿಯೇ ಕಾರಿನಿಂದ ಇಳಿಸಿ ನಡೆದುಕೊಂಡು ಹೋಗಲು ಸೂಚಿಸಿದ್ದರು. ಹೀಗೆ ಮಿತ್ರರಾಷ್ಟ್ರಗಳ ರಾಜತಾಂತ್ರಿಕರನ್ನು ಉದಾಸೀನಭಾವದಿಂದ ಕಂಡದ್ದೂ ಭಾರತ ಬಹಿಷ್ಕಾರ ಒಂದು ಕಾರಣ ಎನ್ನಲಾಗಿದೆ.

Leave a Comment