ಚೀನಾ ವಿಶ್ವಾಸಗಳಿಸಲು ಪಾಕ್ ಶತಪ್ರಯತ್ನ

ಬೀಜಿಂಗ್, ಅ. ೯- ಕಾಶ್ಮೀರ ವಿಷಯದಲ್ಲಿ ಚೀನಾದ ಬೆಂಬಲವನ್ನು ಗಳಿಸಲು ತಿಪ್ಪರಲಾಗ ಹಾಕುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಚೀನಾ ನಾಯಕರೊಂದಿಗೆ ಚರ್ಚಿಸಲು ಇಂದು ಇಲ್ಲಿಗೆ ಆಗಮಿಸಿದ್ದಾರೆ. ಆ. ೨೦೧೮ರಿಂದ ಈಚೆಗೆ ಚೀನಾಗೆ ಇಮ್ರಾನ್ ಖಾನ್ ಅವರು ಭೇಟಿ ನೀಡುತ್ತಿರುವುದು ಇದು ೩ನೇ ಬಾರಿಯಾಗಿದೆ.
ಕಾಶ್ಮೀರ ವಿಷಯದಲ್ಲಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ವಿರುದ್ಧ ತನ್ನ ಬೆಳೆ ಬೇಯಿಸಿಕೊಳ್ಳಲು ಸಾಧ್ಯವಾಗದೇ ಮುಖಭಂಗಕ್ಕೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಈಗ ಉಳಿದಿರುವುದು ತನ್ನ ಆಪ್ತಮಿತ್ರ ರಾಷ್ಟ್ರವಾದ ಚೀನಾ ಮಾತ್ರ. ಅಮೇರಿಕಾ, ಬ್ರಿಟನ್, ಪ್ರಾನ್ಸ್, ಮುಂತಾದ ದೇಶಗಳು ಈಗಾಗಲೇ ಕಾಶ್ಮೀರ ವಿಷಯದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿವೆ.
ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಭಾರತಕ್ಕೆ ಭೇಟಿ ನೀಡುವ ಎರಡು ದಿನಗಳ ಮುಂಚೆ ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಕಮರ್ ಬಾಜ್ವಾ ಚೀನಾ ನಾಯಕರೊಂದಿಗಿನ ಚರ್ಚೆ ನಡೆಸಲು ಇಲ್ಲಿಗೆ ತರಾತುರಿಯಲ್ಲಿ ಆಗಮಿಸಿರುವುದು, ಕಾಶ್ಮೀರ ವಿಷಯದಲ್ಲಿ ಹೇಗಾದರೂ ಮಾಡಿ, ಚೀನಾದ ಬೆಂಬಲ ಪಡೆಯಬೇಕು ಎಂಬುದರಲ್ಲಿ ಎಷ್ಟು ಆತುರತೆ ಹೊಂದಿವೆ ಎಂಬುದನ್ನು ಸೂಚಿಸುತ್ತದೆ.
ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರು ಅಕ್ಟೋಬರ್ ೧೧ ಮತ್ತು ೧೨ ರಂದು ತಮಿಳುನಾಡಿಗೆ ಆಗಮಿಸುತ್ತಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಮಹತ್ವಪೂರ್ಣ ಚರ್ಚೆ ನಡೆಸಲಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗಿಂತಲೂ ಒಂದು ದಿನ ಮೊದಲೇ ಬೀಜಿಂಗ್‌ನಲ್ಲಿ ಇಳಿದಿರುವ ಜನರಲ್ ಬಾಜ್ವಾ ಅಲ್ಲಿಯ ಸೇನಾ ಮುಖ್ಯಸ್ಥರೊಂದಿಗೆ ಜಮ್ಮು – ಕಾಶ್ಮೀರದ ಸ್ಥಿತಿಗತಿ ಕುರಿತಂತೆ, ಚರ್ಚೆ ನಡೆಸಿದ್ದಾರೆ. ಭಾರತದ ಹಠಮಾರಿತನದಿಂದಾಗಿ ದಕ್ಷಿಣ ಏಷ್ಯಾ ವಲಯದಲ್ಲಿ ಶಾಂತಿಗೆ ಭಂಗವಾಗಿದೆ ಎಂಬುದನ್ನೂ ಸೇನಾ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ರಾತ್ರಿ ಚೀನಾ ಪ್ರಧಾನಿ ಲಿ ಕೆ ಕ್ವಿಯಾಂಗ್ ಮತ್ತು ನಾಳೆ ಅಧ್ಯಕ್ಷ ಕ್ಸಿ ಪಿಂಗ್ ಅವರನ್ನು ಭೇಟಿಮಾಡಿ, ಕಾಶ್ಮೀರದ ಸ್ಥಿತಿಗತಿಗಳು ಸೇರಿದಂತೆ, ಹಲವು ವಿಷಯಗಳ ಮೇಲೆ ಚರ್ಚೆ ನಡೆಸಲಿದ್ದಾರೆ. ಈ ಎರಡೂ ಚರ್ಚೆಗಳಲ್ಲಿ ಪ್ರಧಾನಿ ಇಮ್ರಾನ್ ಖಾನ್‌ರೊಂದಿಗೆ ಬಾಜ್ವಾ ಅವರು ಭಾಗವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಒಂದು ದೇಶದ ಪ್ರಧಾನಿ, ಇನ್ನೊಂದು ದೇಶದ ಪ್ರಧಾನಿ ಹಾಗೂ ದೇಶದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರು ಭಾಗಿಯಾಗಿರುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಸೇನೆಯೇ ಆಡಳಿತದ ಚುಕ್ಕಾಣಿ ಹಿಡಿದಿರುವುದರಿಂದ ಇದು ಸಾಧ್ಯವಾಗಿದೆ ಎಂದೂ ಬಾಜ್ವಾ ಅವರ ಭಾಗವಹಿಸುವುದನ್ನು ವಿಶ್ಲೇಷಿಸಲಾಗಿದೆ.

Leave a Comment