‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಜಾಥಾ

ಪುತ್ತೂರು, ಆ.೧೩- ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಜನಜಾಗೃತಿ ಕಾರ್ಯಕ್ರಮದ ಮೂಲಕ ವಿಶಿಷ್ಟ ರೀತಿಯಲ್ಲಿ ೭೦ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ಪುತ್ತೂರಿನ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜು ತೀರ್ಮಾನ ಕೈಗೊಂಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರೂಪಲೇಖಾ ಹೇಳಿದರು.
ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಂದ ಆಗಸ್ಟ್ ೧೫ ರಂದು ಬೆಳಿಗ್ಗೆ ೧೦.೩೦ರಿಂದ ಕರಪತ್ರ ಮತ್ತು ಜಾಗೃತಿ ಪುಸ್ತಕ ಮೂಲಕ ಜನರನ್ನು ಸಂಪರ್ಕಿಸಲು ದರ್ಭೆಯಿಂದ ಬೊಳುವಾರು ತನಕ ಜನಜಾಗೃತಿ ಜಾಥಾ ನಡೆಯಲಿದ್ದು, ಈ ಸಂದರ್ಭದಲ್ಲಿ ಜನಸಂಪರ್ಕ ಮಾಹಿತಿ ಕಾರ್ಯಕ್ರಮವೂ ನಡೆಯಲಿದೆ. ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಚೀನಾದಲ್ಲಿ ಉತ್ಪತ್ತಿಯಾಗುವ ಬಹುತೇಕ ವಸ್ತುಗಳಿಗೆ ಭಾರತ ಮಾರುಕಟ್ಟೆಯಾಗಿದೆ. ಇಲ್ಲಿನ ಆರ್ಥಿಕತೆಯನ್ನು ಬುಡಮೇಲು ಮಾಡುವ ಹುನ್ನಾರವೂ ಇದರಲ್ಲಿದೆ. ಭಾರತವು ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಪ್ರಸ್ತುತ ಜಾಗತಿಕ ಸ್ಥಿತಿ ಅನುಕೂಲಕರವಾಗಿದ್ದು, ಪುತ್ತೂರನ್ನು ಚೀನಾ ವಸ್ತುಗಳ ಮುಕ್ತ ಊರನ್ನಾಗಿಸುವ ಸಂಕಲ್ಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜನತೆಗೆ ಮಾಹಿತಿ ನೀಡುವ ಹಾಗೂ ಅವರಲ್ಲಿ ಜಾಗೃತಿಯನ್ನುಂಟು ಮಾಡುವ ಕೆಲಸಕ್ಕೆ ನರೇಂದ್ರ ಕಾಲೇಜು ಮುಂದಾಗಿದೆ. ಪುತ್ತೂರಿನ ಜನತೆ ಹಾಗೂ ಇಲ್ಲಿನ ವರ್ತಕರಲ್ಲಿ ಜಾಥಾ ನಡೆಸುವ ಮೂಲಕ ಅರಿವು ಉಂಟು ಮಾಡುವ ಪ್ರಯತ್ನ ಈ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ನಿರ್ದೇಶಕರಾದ ಸಾಜ ರಾಧಾಕೃಷ್ಣ ಆಳ್ವ, ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಕುಮಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರವಿಕುಮಾರ್ ಬಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥರಾಜ್ ಕೆ ಹಾಗೂ ಕಾರ್ಯದರ್ಶಿ ಸುವಿತಾ ರೈ ಉಪಸ್ಥಿತರಿದ್ದರು.

Leave a Comment