ಚೀನಾದಲ್ಲಿ ಪ್ರವಾಹ ಭೂ ಕುಸಿತಕ್ಕೆ 37 ಮಂದಿ ಬಲಿ

ವಿಯೆಟ್ನಾಂ, ಅ. ೧೨- ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚೀನಾದ ವಿಯೆಟ್ನಾಂ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾಗಿ 37 ಜನ ಬಲಿಯಾಗಿದ್ದಾರೆ. ಸಾವಿರಾರು ಮನೆಗಳು ಜಖಂಗೊಂಡಿವೆ. ಎರಡು ಲಕ್ಷಕ್ಕೂ ಅಧಿಕ ನಾಗರೀಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಆದೇಶ ನೀಡಲಾಗಿದೆ.

ವಿಯೆಟ್ನಾಂನ ಉತ್ತರ ಮತ್ತು ಕೇಂದ್ರ ಪ್ರದೇಶಗಳಲ್ಲಿ ಪ್ರವಾಹ ಹೆಚ್ಚಿದ್ದು, ಕನಿಷ್ಟ 37 ಜನ ಸಾವನ್ನಪ್ಪಿದ್ದಾರೆ ಎಂದು ವಿಯೆಟ್ನಾಂನ ಅಧಿಕೃತ ಮೂಲಗಳು ತಿಳಿಸಿವೆ.

ಈ ಪ್ರಕೃತಿ ವಿಕೋಪಕ್ಕೆ 21 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸುಮಾರು ಒಂದು ಸಾವಿರ ಮನೆಗಳು ನೆಲಕ್ಕುರುಳಿವೆ. ಮತ್ತೆ 16,740 ಮನೆಗಳು ಜಖಂಗೊಂಡಿವೆ.

ರಸ್ತೆಗಳು ಕೊಚ್ಚಿಹೋಗಿವೆ, ಚರಂಡಿಗಳು ನದಿಯಂತೆ ತುಂಬಿ ಹರಿಯುತ್ತಿವೆ, ವಿಯೆಟ್ನಾಂ ಪ್ರದೇಶದಲ್ಲಿ ನಾಗರೀಕರು ಹೊರಬರಲೂ ಸಾಧ್ಯವಾಗದಂತೆ ಪ್ರವಾಹ ಸೃಷ್ಟಿಯಾಗಿದೆ. ಎತ್ತ ನೋಡಿದರೂ ನೀರು, ಜನರನ್ನು ಭಯಭೀತರನ್ನಾಗಿಸಿದೆ.

ವಿಯೆಟ್ನಾಂ ಉತ್ತರ ಭಾಗದ ಹೋವಾ ಬಿನ್ ಪ್ರದೇಶದಲ್ಲಿ ಪ್ರವಾಹದ ಹೊಡೆತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಇತರೆ 21 ಜನ ಕಣ್ಮರೆಯಾಗಿದ್ದಾರೆ. ಭೂ ಕುಸಿತದಿಂದಾಗಿ 4 ಮನೆಗಳು ಕುಸಿದಿದ್ದು, ಮನೆಯಲ್ಲಿದ್ದವರಲ್ಲಿ 6 ಜನ ಸಾವನ್ನಪ್ಪಿದ್ದಾರೆ, 12 ಜನ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರಗತಿಯಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಕಣ್ಮರೆಯಾದವರ ಪತ್ತೆಗಾಗಿ ಶೋಧನೆ ನಡೆದಿದೆ.

ನಿನ್ ಬಿನ್ ಪ್ರದೇಶದ ಎರಡು ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಆದೇಶ ಮಾಡಲಾಗಿದೆ. ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಈ ಅನಾಹುತಗಳು ಸಂಭವಿಸಿವೆ.

Leave a Comment