ಚೀಟರ್ ಮೋನ್ಯಾನಿಂದ ವ್ಯಕ್ತಿಗೆ 50 ಲಕ್ಷ ತಿರುಪತಿ ನಾಮ

ಧಾರವಾಡ, ಜ 11- ಗಡಿಪಾರುಗೊಂಡರೂ ತನ್ನ ಚಾಳಿ ಬಿಡದ ಇಲ್ಲಿನ ಚೀಟರ್ ಮೋನ್ಯಾ ಅಲಿಯಾಸ್ ಮೋಹನ ವಾಳ್ವೇಕರ ವ್ಯಕ್ತಿಯೋರ್ವರಿಗೆ ತಿರುಪತಿ ಬಂಗಾರ ನೀಡುವ ಆಮಿಷ ತೋರಿ ನಾಮ ಹಾಕಿದ ಘಟನೆ ಜರುಗಿದೆ.
ಚೀಟರ್ ಮೋನ್ಯಾ ಹಾಗೂ ಆತನ ಕುಟುಂಬದವರು ಸೇರಿಕೊಂಡು ಜೀತೇಂದ್ರ ದೇಶಮುಖ ಎಂಬ ಏಜೆಂಟನ ಮೂಲಕ ಅಶ್ವಿನಕುಮಾರ ಪಾಟೀಲ ಎಂಬ ವ್ಯಕ್ತಿಗೆ ಒಂದು ಟನ್ ತಿರುಪತಿ ಬಂಗಾರ ನೀಡುವುದಾಗಿ ನಂಬಿಸಿದ್ದಾರೆ. ಅದರ ಪ್ರಕಾರ ಮೊದಲ ಏಜೆಂಟ್ ಜೀತೇಂದ್ರ 3 ಲಕ್ಷ ಹಣ ಪಡೆದಿದ್ದಾನೆ. ನಂತರ ಅಶ್ವಿನಕುಮಾರ ಅವರಿಗೆ ಚೀಟರ್ ಮೋನ್ಯಾ ತನ್ನ ಮನೆಯಲ್ಲಿನ ಬಂಗಾರ ತೋರಿಸಿ 47 ಲಕ್ಷ ನಗದು ಹಣವನ್ನು ಪಡೆದು ಬಂಗಾರವನ್ನು ನೀಡದೇ ಅಶ್ವಿನಕುಮಾರ ಅವರನ್ನು ಹೊಡೆದು ಬಡಿದು ಪರಾರಿಯಾಗಿದ್ದಾನೆ.
ಉಪನಗರ ಠಾಣೆಯಲ್ಲಿ ಚೀಟರ್ ಮೋನ್ಯಾ ವಿರುದ್ಧ ಅಶ್ವಿನಕುಮಾರ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ. ಈಗಾಗಲೇ ಇಂತಹ ಅನೇಕ ಪ್ರಕರಣಗಳಲ್ಲಿ ಚೀಟರ್ ಮೋನ್ಯಾ ಭಾಗಿಯಾಗಿದ್ದು ಈಚೆಗಷ್ಟೇ ಆತನನ್ನು ಗಡಿಪಾರು ಮಾಡಲಾಗಿದ್ದರೂ ಮತ್ತೆ ಮತ್ತೆ ಇಂತಹ ಕಾಯಕಕ್ಕೆ ಮುಂದಾಗುತ್ತಿದ್ದಾನೆ. ಜನರು ಕೂಡ ಆತನ ಮಾತಿಗೆ ಮರುಳಾಗುತ್ತಿರುವುದು ವಿಪರ್ಯಾಸವೆ ಸರಿ!

Leave a Comment