ಚಿ.ಮೂ. ಕನ್ನಡದ ……. ಮಿಂಚು

ಚಿ.ಮೂ. ಎಂದೇ ಪ್ರಖ್ಯಾತರಾದ ಡಾ. ಎಂ. ಚಿದಾನಂದ ಮೂರ್ತಿ ನನ್ನ ನೆಚ್ಚಿನ ಗುರುಗಳು. 1975, 77ರ ಅವಧಿಯಲ್ಲಿ ನಾನು ಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿದ್ದಾಗ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಅವರ ಮಾರ್ಗದರ್ಶನದಿಂದ ನಮ್ಮ ಅಧ್ಯಯನಕ್ಕೆ ಹೊಸತೊಂದು ಆಯಾಮ ಲಭಿಸಿದ್ದರಲ್ಲಿ ಅವರ ಆದರ್ಶಗಳೇ ಕಾರಣ. ಆ ಕಾಲಕ್ಕೆ ಕನ್ನಡ ಅಧ್ಯಯನ ಕೇಂದ್ರ ವಿವಾದಗಳ ಗದ್ದಲಗಳ ಗೂಡಾಗಿತ್ತು. ಈ ಎಲ್ಲಾ ಅವ್ಯವಸ್ಥೆಯ ನಡುವೆಯೂ ಅವರು ತಲೆಕೆಡಿಸಿಕೊಳ್ಳದೆ ವಿದ್ಯಾರ್ಥಿಗಳಿಗೆ ನಿರ್ವಂಚನೆಯಿಂದ ಪಾಠ ಮಾಡುತ್ತಿದ್ದುದು ವೈಶಿಷ್ಟ್ಯಪೂರ್ಣವಾಗಿತ್ತು.

ಆಗ ಅಲ್ಲಿ ಬ್ರಾಹ್ಮಣ, ಲಿಂಗಾಯಿತ, ದಲಿತ ಎಂಬ ಮೂರು ಬಣಗಳು ವ್ಯವಸ್ಥಿತವಾಗಿ ಹೋರಾಡುತ್ತಿದ್ದವು. ಅಧ್ಯಾಪಕ ವರ್ಗದಲ್ಲೂ ಈ ವರ್ಗೀಕರಣ ಎದ್ದು ಕಾಣುತ್ತಿತ್ತು. ಇದೆಲ್ಲವನ್ನೂ ಸಹಿಸಿಕೊಂಡು ಅಂದಿನ ನಿರ್ದೇಶಕರಾಗಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಬೆಂಬಲವಾಗಿ ನಿಂತು ಕೇಂದ್ರವನ್ನು ಬಲಿಷ್ಟವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಆಗಿನ್ನೂ ಚಿ.ಮೂ. ಎಂಬ ಶಾರ್ಟ್‌ಪಾರಂ ಬಂದಿರಲಿಲ್ಲವಾದರೂ, ಅವರು ಎಲ್ಲಾ ಅಧ್ಯಾಪಕ ವೃಂದದವರೊಂದಿಗೆ ಜಾತಿ ವರ್ಗಗಳ ಬೇಧವಿಲ್ಲದೆ, ವಿದ್ಯಾರ್ಥಿಗಳೊಂದಿಗೆ ಅದರ ಯಾವುದು ಸೋಂಕು ತಗಲದಂತೆ, ನಿಷ್ಕಳಂಕ ಅಧ್ಯಾಪಕರಾಗಿ ನಮಗೆಲ್ಲಾ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ನಾನು ಶಾಸನ ಶಾಸ್ತ್ರ ಮತ್ತು ಕರ್ನಾಟಕದ ಸಾಂಸ್ಕೃತಿಕ ಅಧ್ಯಯನ ವಿಷಯವನ್ನು ಐಚ್ಛಿಕವಾಗಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದು, ಒಂದು ದೊಡ್ಡ ಸುಯೋಗವೇ ಸರಿ. ಅವರ ಪಿ.ಎಚ್.ಡಿ. ಸಂಶೋಧನಾ ಮಹಾಪ್ರಬಂಧ ‘ಕರ್ನಾಟಕದ ಸಾಂಸ್ಕೃತಿಕ ಇತಿಹಾಸ’. ನಮ್ಮೆಲ್ಲರಿಗೆ ಭಗವದ್ಗೀತೆಯ ದಾರಿದೀಪವಾಗಿದ್ದು, ಕನ್ನಡದ ಸಂಶೋಧನಾ ಕ್ಷೇತ್ರದಲ್ಲಿ ಎಂದೆಂದಿಗೂ ಪ್ರಜ್ವಲವಾಗಿ ನಿಲ್ಲುವಂತಹ ಕೃತಿಯಾಗಿದೆ.

ಸಂಶೋಧನೆ ಎಂದರೆ, ಹಾಗಿರಬೇಕೆಂದು ಸೂಚಿಸುವ ಆಕೃತಿ ಎಲ್ಲಾ ಸಂಶೋಧಕರ ಕನ್ನಡಿಯಾಗಿ ಶಾಶ್ವತವಾಗಿ ಉಳಿಯುತ್ತದೆ. ಅಷ್ಟೊಂದು ವಿದ್ವತ್ ಪೂರ್ಣವಾಗಿ ಖಚಿತವಾಗಿ ಹಾಗೂ ಸೃಜನಶೀಲವಾಗಿ ರಚಿತವಾಗಿ ಕೃತಿಗೆ ನೂರು ಜ್ಞಾನಪೀಠ ಪ್ರಶಸ್ತಿ ಕೊಟ್ಟರೂ, ನೂರು ಕರ್ನಾಟಕ ರತ್ನ ಕೊಟ್ಟರೂ ಸಾಲದು.

ಚಿ.ಮೂ. ವಿದ್ಯಾರ್ಥಿಗಳಾಗಿದ್ದ ನಮ್ಮೆಲ್ಲರನ್ನೂ ಹುರಿದುಂಬಿಸಲು ಸಣ್ಣಸಣ್ಣ ಅಸೈನ್‌ಮೆಂಟ್ ಕೊಡುತ್ತಿದ್ದರು. ನಮ್ಮ ಊರ ಸುತ್ತಮುತ್ತಲ ಹಳ್ಳಿಗಳ ಪಟ್ಟಿ ಕೊಡಲು ಕೇಳುತ್ತಿದ್ದರು. ಊರ ಜನರ ಹೆಸರುಗಳ ಪಟ್ಟಿ ಕೊಡಲು ಸೂಚಿಸುತ್ತಿದ್ದರು. ಅದರಲ್ಲಿ ವಿಶೇಷ ಕಂಡರೆ, ಅದನ್ನು ಅನಲೈಸ್ ಮಾಡಲು, ಅದರ ಇತಿಹಾಸ ಕಂಡುಹಿಡಿಯಲು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಹೀಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಉದ್ದೀಪಿಸಲು ಯತ್ನಿಸುತ್ತಿದ್ದರು.

ಸಂಶೋಧನೆ ಕುರಿತಂತೆ, ಇಂಗ್ಲಿಷ್ ಗ್ರಂಥಗಳನ್ನು ಓದುವಂತೆ ಪ್ರಚೋದಿಸುತ್ತಿದ್ದರು. ಹೀಗೆ ನಮ್ಮ ಆಂಗ್ಲ ಭಾಷಾ ಪ್ರಜ್ಞೆ ಬೆಳೆಯುವಂತೆಯೂ ಮಾಡಿದ್ದರು. ನಾನು ಎಂಎ ಪರೀಕ್ಷೆ ಮುಗಿಸಿದ ನಂತರ, ಅವರ ಜೊತೆ ಲಿಂಗ್ವಿಸ್ಟಿಕ್ಸ್‌ನ ಸಮಾವೇಶದಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ದೊರೆಯಿತು. ನನಗೆ ಸ್ವಲ್ಪ ಇಂಗ್ಲಿಷ್ ಚೆನ್ನಾಗಿ ಬರುತ್ತಿದ್ದರಿಂದ ಆಸ್ಟ್ರೇಲಿಯಾದಿಂದ ಬಂದ ಓರ್ವ ಮಹಿಳಾ ಪ್ರತಿಭೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಒಂದು ವಾರ ಕಾಲ ಆ ಮಹಿಳಾ ಪ್ರತಿನಿಧಿ ಜೊತೆಗಿದ್ದುದೇ ಒಂದು ವಿಶಿಷ್ಟ ಅನುಭವ. ಅದರೊಂದಿಗೆ ಕೇರಳ ವಿವಿಯ ಪ್ರಾಧ್ಯಾಪಕರೊಬ್ಬರ ಜವಾಬ್ದಾರಿಯನ್ನು ನನಗೆ ವಹಿಸಿದ್ದರು.

ಅವರಿಬ್ಬರನ್ನೂ ಸಮ್ಮೇಳನದುದ್ದಕ್ಕೂ ಸಮರ್ಪಕವಾಗಿ ನೋಡಿಕೊಂಡು ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದೆ. ನಂತರ, ಎಂಎ ಫಲಿತಾಂಶ ಬಂದು ನನಗೆ ಶಾಸನ ಶಾಸ್ತ್ರದಲ್ಲಿ ಚಿನ್ನದ ಪದಕ ದೊರೆತಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಆದರೆ ತಟ್ಟನೆ ನಿರುದ್ಯೋಗ ಭೂತ ಎದುರಿಗೆ ನಿಂತಾಗ ಯಾವ ಮೆಡಲ್ ತೆಗೆದುಕೊಂಡು ಏನು ಮಾಡುವುದು ಅಂತ ನಿರಾಸೆ ಕಾಡಿದ್ದೂ ನಿಜ. ಆಗ ಮೈಸೂರು ವಿವಿ ಕನ್ನಡ ನಿಘಂಟಿನ ಕೆಲಸಕ್ಕೆ ಅರ್ಜಿ ಕರೆಯಿತು.

ನಾನು ಅರ್ಜಿ ಹಾಕಿ ಚಿ.ಮೂ. ಅವರಿಗೆ ಶಿಫಾರಸು ಮಾಡುವಂತೆ ಕೋರಿದೆ. ಅವರು ಹಾ.ಮಾ. ನಾಯಕ್ ಅವರಿಗೆ ಒಂದು ಪತ್ರ ಬರೆದು ನನ್ನನ್ನು ಪರಿಗಣಿಸುವಂತೆ ಶಿಫಾರಸು ಮಾಡಿದರು. ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಹಾ.ಮಾ. ನಾಯಕರು ಕೆಲಸವನ್ನೂ ಕೊಡಲಿಲ್ಲ. ಆದರೆ ಕಷ್ಟದಲ್ಲಿದ್ದ ತನ್ನ ವಿದ್ಯಾರ್ಥಿ ಆ ಕೆಲಸಕ್ಕೆ ಯೋಗ್ಯ ಎಂದಾಗ ಚಿ.ಮೂ. ಮನಸ್ಸಿಗೆ ಬಂದಾಗ ಮಾತ್ರ ಅವರು ಶಿಫಾರಸು ಮಾಡಿದ್ದರು ಎಂಬುದೇ ನನ್ನ ಪುಣ್ಯ. ನಂತರದಲ್ಲಿ ನಮ್ಮೂರ ಬಳಿಯಿದ್ದ ವಾಡೆಬಾದಿಯಾ ಮೇಲಿನ ಶಾಸನ ಕುರಿತ ಲೇಖನ ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದಾಗ ಚಿ.ಮೂ. ಸಂತೋಷ ವ್ಯಕ್ತಪಡಿಸಿದ್ದರು.

ನಂತರ ನಾನು, ದೂರದರ್ಶನದಲ್ಲಿ ಸುದ್ದಿಸಂಪಾದಕನಾದಾಗ ಅವರು ಸಂಶೋಧಿಸಿದ ತೆಲುಗು ಬಸವ ಪುರಾಣ ರಚಿಸಿದ ಸೋಮನಾಥನ ಸಮಾಧಿಯ ಬಗ್ಗೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದೆವು. ಮಾಗಡಿ ಬಳಿಯ ಕಲ್ಯಾಣಿ ನಮ್ಮ ತಂಡವನ್ನು ಕರೆದೊಯ್ದು ಅಲ್ಲಿನ ಸ್ಥಳೀಯರೊಂದಿಗೆ ಬೆರೆತು ಸಮಾಧಿಯನ್ನು ರಕ್ಷಿಸಲು ಅವರು, ಮಾಡಿದ ಹೋರಾಟದಲ್ಲಿ ಭಾಗಿಯಾದ್ದುದೂ ಸಹ ನನಗೆ ಹೆಮ್ಮೆಯನ್ನು ತಂದುಕೊಟ್ಟ ವಿಚಾರವಾಗಿದೆ. ಅನಂತರದಲ್ಲಿ ಅವರ ಶಕ್ತಿಕೇಂದ್ರದ ಪತ್ರಿಕಾಗೋಷ್ಠಿಗಳಿಗೆ ನಾನು ತಪ್ಪದೆ ಹೋಗಿ ಅವುಗಳನ್ನು ಪ್ರಸಾರ ಮಾಡುವಲ್ಲಿ ವಿಶೇಷ ಆಸಕ್ತಿಯನ್ನು ನಾನು ತೋರಿದ್ದೇನೆ.

ಕಳೆದ ತಿಂಗಳು ಅವರು, ಪ್ರೆಸ್ ಕ್ಲಬ್‌ನಲ್ಲಿ ಭೇಟಿಯಾಗಿದ್ದರು. ಆರೋಗ್ಯವಾಗಿ ಚಟುವಟಿಕೆಯಿಂದಲೇ ಕೂಡಿದ್ದರು. ಇಷ್ಟು ಬೇಗ ಅವರು, ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ಭಾವನೆಯೂ ನನ್ನಲ್ಲಿ ಮೂಡಿರಲಿಲ್ಲ. ಆದರೂ ಯಾಕೋ ಸ್ವಲ್ಪ ಮೆತ್ತಗಾಗಿದ್ದಾರೆ ಅನಿಸಿದರೂ, ಅವರ ಚೈತನ್ಯಕ್ಕೆ ನಾನೇ ಬೆರಗಾಗಬೇಕಾಯಿತು. ಅವರು ತಮ್ಮ ಮನೆಯಲ್ಲಿ ಪಾದರೇನಿಯನ್ ನಾಯಿಯೊಂದನ್ನು ಸಾಕಿದ್ದರು. ಅದಕ್ಕೆ ಮಿಂಚು ಎಂದು ಹೆಸರಿಟ್ಟಿದ್ದರು. ತಾವು ಹಂಪಿನಗರದಲ್ಲಿ ಕಟ್ಟಿಕೊಂಡ ಮನೆಗೂ ಮಿಂಚು ಎಂಬ ಹೆಸರನ್ನು ಇಟ್ಟು ನಾಯಿಯ ಮೇಲಿನ ಪ್ರೀತಿಯನ್ನು ಮಿಂಚುವಂತೆ ಮಾಡಿದ್ದುದು ಅಂದು ಚಿ.ಮೂ. ಅವರ ವಿಶೇಷತೆಯೇ ಸರಿ.

ಅಂತೂ ನೆಚ್ಚಿನ ಗುರುಗಳೊಬ್ಬರನ್ನು ಕಳೆದುಕೊಂಡು ಅವರ ಪಾರ್ಥಿವ ಶರೀರದ ಮುಂದೆ ನಿಂತು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಒಂದು ನಿಮಿಷ ಪ್ರಾರ್ಥಿಸುವಾಗ ನನ್ನ ಕಣ್ಣಂಚಿನಲ್ಲಿ ಎರಡು ಹನಿ ಉದುರಿದವಾದರೂ, ಮನಸ್ಸು ಭಾರವಾಗಿದೆ. ಅಪರಿಮಿತ ಮಾನವೀಯತೆಯನ್ನು ಮೆರೆದ ಚಿದಾನಂದ ಮೂರ್ತಿ ಅವರೆಲ್ಲಾ ಶಿಷ್ಯಕೋಟಿಗೆ ಎಂದೆಂದಿಗೂ ಗುರುವರ್ಯಕ್ಕೆ ಸರಿ.
– ಡಾ. ಮೈ.ಸಿ. ಪಾಟೀಲ್.

Leave a Comment