ಚಿರ‌ಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ

ಬೆಂಗಳೂರು.ಜೂ.7- ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಂದು ಮಧ್ಯಾಹ್ನ‌ (39) ನಿಧನರಾಗಿದ್ದಾರೆ.
ಹೃದಯಾಘಾತ ಹಿನ್ನೆಲೆಯಲ್ಲಿ ಸಾಗರ್ ಅಪಲೋ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ
ಪತ್ನಿ ಹಾಗು ನಟಿ ಮೇಘನಾ ರಾಜ್ , ಸಹೋದರ ನಟ ದೃವ ಸರ್ಜಾ , ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.
1980 ಅಕ್ಟೋಬರ್ 17 ರಂದು ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು.

ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ನಟಿ ಮೇಘನಾ ಅವರನ್ನು ಎರಡು ವರ್ಷದ ಹಿಂದೆ ವರಿಸಿದ್ದರು.ಚಿರಂಜೀವಿ ಅವರ ತಾತ ಶಕ್ತಿ ಪ್ತಸಾದ್ ಕನ್ನಡ ಚಿತ್ರರಂಗದ ಖಳ ನಟರಾಗಿ ಛಾಪು ಮೂಡಿಸಿದ್ದರು. ಜೊತೆಗೆ ಮಾವ ಅರ್ಜುನ್ ಅರ್ಜಾ ಕನ್ನಡ, ತೆಲುಗು, ತಮಿಳು , ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದ ಚಿರಂಜೀವಿ ಸರ್ಜಾ ಅವರು ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದರು.
ಚಿರು, ದಂಡಂದಶಗುಣಂ, ಕೆಂಪೇಗೌಡ, ಸಿಂಗ, ಅಜಿತ್, ವರದನಾಯಕ ಸೇರಿದಂತೆ 22 ಚಿತ್ರಗಳಲ್ಲಿ ನಟಿಸಿದ್ದರು. 2018ರ ಮೇ.‌ 2 ರಂದು ನಟಿ ಮೇಘನಾ ರಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಿತ್ರರಂಗದ ಕುಟುಂಬದ ಹಿನ್ನೆಲೆಯಲ್ಲಿ ಬಂದ ಚಿರಂಜೀವಿ ಸರ್ಜಾ ಅವರಲ್ಲಿ ನಟನೆ ರಕ್ತಗತವಾಗಿ ಮೂಡಿ ಬಂದಿತ್ತು

ಚಿತ್ರರಂಗದ ಕಂಬನಿ:
ಯುವ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಚಿರಂಜೀವಿ ಸರ್ಜಾ ಅವರು ಯಾವುದೇ ತಂಟೆ ತಕರಾರಿಗೆ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಚಿತ್ರರಂಗದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹಲವರು ಕಂಬನಿ ಮಿಡಿದಿದ್ದಾರೆ.

 

ಅರ್ಜುನ್ ಸರ್ಜಾ ಗಾಢ್ ಫಾದರ್:

ನಟ ಅರ್ಜುನ್ ಸರ್ಜಾ ಅವರ ಸಹೋದರಿಯ ಮಗನಾದ ಚಿರಂಜೀವಿ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ ಚಿತ್ರದ ಪ್ರತಿಯೊಂದು ಬೆಳವಣಿಗೆಯಲ್ಲಿ ಗಾಢ್ ಫಾದರ್ ಆಗಿ ನಿಂತಿದ್ದರು.

ಹಿನ್ನೆಲೆ: ಜಯನಗರದ ವಿಜಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಚಿರಂಜೀವಿ ಸರ್ಜಾ ಅವರು, ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ವಾಯು ಪುತ್ರ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪ್ರಯತ್ನದಲ್ಲಿ ಎಲ್ಲರ ಗಮನ ಸೆಳೆದಿದ್ದರು.

Share

Leave a Comment