ಚಿರು, ನೀ ನನ್ನ ಆತ್ಮದ ಅರ್ಧ ಭಾಗ” ನೋವು ತೋಡಿಕೊಂಡ ಮೇಘನಾ


ಬೆಂಗಳೂರು, ಜೂನ್ 18 -ಚಂದನವನದ ಚಂದದ ನಗುವಿನ ಯುವ ಸಾಮ್ರಾಟ್ ಚಿರಂಜೀವಿ ಎಲ್ಲರ ಮನದಲ್ಲಿ ಸವಿ ನೆನಪುಗಳನ್ನು ಉಳಿಸಿ ಮರೆಯಾಗಿದ್ದಾರೆ. ಜತೆಗೆ ಹಿತೈಷಿಗಳು, ಕುಟುಂಬ ಸದಸ್ಯರು, ಮನದನ್ನೆ ಮೇಘನಾಗೆ ಎಂದಿಗೂ ಸಹಿಸಲಾಗದ ನೋವು ನೀಡಿ ದೂರಾಗಿದ್ದಾರೆ.

ಪತಿಯನ್ನು ನೆನೆದು ಭಾರವಾದ ಮನದ ನೋವನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿರುವ ಮೇಘನಾ, ‘ನೋವಿನ ಜತೆಗೆ ಹರುಷವನ್ನೂ ನೀಡಿ ಹೋಗಿದ್ದೀಯೆ. ನೀ ಮತ್ತೆ ಬರುವವರೆಗೂ ಕಾಯುವೆ” ಎಂದು ಬರೆದುಕೊಂಡಿದ್ದಾರೆ.

“ಚಿರು ಬಾರಿ ಬಾರಿ ಎಷ್ಟು ಬಾರಿ ಪ್ರಯತ್ನಿಸಿದರೂ ನನ್ನ ಮನದಾಳದ ಮಾತುಗಳನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನನ್ನದು. ನಿನ್ನ ಮೇಲಿನ ಪ್ರೀತಿ, ಹುಚ್ಚು, ವಿಶ್ವಾಸದ ಬಗ್ಗೆ ಮಾತಾಡಲು ಶಬ್ದಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಸರ್ವಸ್ವ, ನನ್ನ ಮಗು, ನನ್ನ ಪತಿ… ನೀನು ಇದೆಲ್ಲಕ್ಕಿಂತ ಹೆಚ್ಚು” ಎಂದು ಹೇಳಿಕೊಂಡಿದ್ದಾರೆ

“ನೀನು ಬಂದೇ ಬಿಡುವೆ ಎಂಬ ಆಸೆ. ಆದರೆ ನೀನು ಬರದಿದ್ದಾಗ ಆತ್ಮವನ್ನೇ ಸುಡುವಂತಹ ನೋವು. ಪ್ರತಿದಿನದ ಪ್ರತಿಕ್ಷಣ ನಿನ್ನನ್ನು ಸ್ಪರ್ಶಿಸಲಾಗದೆ ಕಾಲ್ಕೆಳಗಿನ ಭೂಮಿ ಕುಸಿದಂತಹ ಅನುಭವ” ಎಂದು ಹೇಳಿದ್ದು, ಎಲ್ಲರ ಮನ ಕರಗಿಸುವಂತಿದೆ.
ಎಷ್ಟು ಪ್ರೀತಿ! ಒಂಟಿಯಾಗಿ ಬಿಟ್ಟು ಹೋಗಲಿಲ್ಲ “ನನ್ನ ಕಂಡರೆ ನಿನಗೆ ಅದೆಷ್ಟು ಪ್ರೀತಿ. ಒಂಟಿಯಾಗಿ ಬಿಟ್ಟು ಹೋಗಲಿಲ್ಲ. ಹೋಗುತ್ತಾ, ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನು ಕೊಟ್ಟು ಹೋಗಿದ್ದೀಯೆ. ಇದಕ್ಕಾಗಿ ಚಿರಋಣಿ. ಮಗುವಾಗಿ ಬರುವ ನಿನ್ನನ್ನು ಮುದ್ದಿಸುವ ಕಾತುರ. ಎಲ್ಲರನ್ನೂ ಹರ್ಷಿಸುತ್ತಿದ್ದ ಆ ನಿನ್ನ ನಗುವನ್ನು ಮತ್ತೊಮ್ಮೆ ಕೇಳುವ ಕಾತುರ. ನನ್ನ ಕೊನೆಯ ಉಸಿರು ಇರುವವರೆಗೂ ನೀನು ಚಿರಂಜೀವಿ. ನೀನು ನನ್ನಲ್ಲೇ ಇರುವೆ” ಎಂದು ಮೇಘನಾ ಬರೆದುಕೊಂಡಿದ್ದಾರೆ

Share

Leave a Comment