ಚಿನ್ನಾಭರಣ ಕಳವು: ಆರೋಪಿಗಳ ಬಂಧನ

ಅರಸೀಕೆರೆ, ಜ. ೧೧- ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಗುಂಟೆ ಗ್ರಾಮದ ಸಂತೋಷ್ ಹಾಗೂ ಆಂಧ್ರ ಮೂಲದ ವೆಂಕಟೇಶ್ ಎಂಬುವರೇ ಬಂಧಿತ ಆರೋಪಿಗಳು. ಕಳವು ಪ್ರಕರಣ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಪ್ರಕಾಶ್‌ಗೌಡ, ಅಧೀಕ್ಷಕಿ ನಂದಿನಿ ಹಾಗೂ ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ರಂಗಸ್ವಾಮಿ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ ತಂಡವನ್ನು ರಚಿಸಲಾಗಿತ್ತು.

ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರು ಮತ್ತು ಪಿರಿಯಾಪಟ್ಟಣಕ್ಕೆ ತೆರಳಿ 135 ಗ್ರಾಂ ತೂಕದ 3 ಲಕ್ಷದ 65 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2018ರಲ್ಲಿ ನಡೆದಿದ್ದ ಮತ್ತೊಂದು ಪ್ರಕರಣದಲ್ಲಿ ಮೈಸೂರು ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮೀರ್ ಜಾನ್ ಎಂಬುವನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆಯಲ್ಲಿ ಆತನು ನೀಡಿದ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಪೆನುಗೊಂಡ ಎಂಬ ಸ್ಥಳಕ್ಕೆ ಪೊಲೀಸರು ತೆರಳಿ ಸುಮಾರು 68 ಗ್ರಾಂ ತೂಕದ 1 ಲಕ್ಷದ 83 ಸಾವಿರ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳವು ಪ್ರಕರಣಗಳನ್ನು ಪತ್ತೆ ಮಾಡಲು ಶ್ರಮಿಸಿದ ತಂಡದ ವೃತ್ತ ನಿರೀಕ್ಷಕರಾದ ರಂಗಸ್ವಾಮಿ ಹಾಗೂ ಸಿಬ್ಬಂದಿಯನ್ನು ಎಸ್ಪಿ ಡಾ. ಪ್ರಕಾಶ್‌ಗೌಡ ಶ್ಲಾಘಿಸಿದ್ದಾರೆ.

Leave a Comment