ಚಿನ್ನಸ್ವಾಮಿಯಲ್ಲಿ ಪುಣೆ ವಿರುದ್ಧ ಆರ್‌ಸಿಬಿ ಮುಖಾಮುಖಿ

ಬೆಂಗಳೂರು: ಪಾಯಿಂಟ್‌ ಪಟ್ಟಿಯಲ್ಲಿ ಸದ್ಯ ಕೆಳ ಕ್ರಮಾಂಕದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರೈಸಿಂಗ್‌ ಪುಣೆ ಸೂಪರ್‌ ಗೈಂಟ್ಸ್‌ ತಂಡಗಳು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ರಾತ್ರಿ 8ಕ್ಕೆ ಪಂದ್ಯ ಶುರುವಾಗಲಿದೆ.

ಆರ್‌ಸಿಬಿ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಐಪಿಎಲ್‌ ಇತಿಹಾಸದಲ್ಲಿಯೇ ಅತೀ ಹೆಚ್ಚು ವೈಯಕ್ತಿಕ ಸ್ಕೋರ್‌ ಮಾಡಿರುವ ಸಾಧನೆ ಮಾಡಿದ್ದಾರೆ. 2013ರಲ್ಲಿ ಗೇಲ್‌ 175 ರನ್‌ ಹೊಡೆದಿದ್ದು ಪುಣೆ ವಾರಿಯರ್ಸ್ ತಂಡದ ಎದುರು. ಆದರೆ ಈಗ ಪುಣೆ ಮಾಲೀಕರು ಬದಲಾಗಿದ್ದು, ತಂಡವೂ ಸಂಪೂರ್ಣ ಚೇಂಜ್‌ ಆಗಿದೆ.

ಹಿಂದೆ ಪುಣೆ ತಂಡದ ಎದುರು ಮಿಂಚು ಹರಿಸಿದ್ದ ಕ್ರಿಸ್‌ ಗೇಲ್‌ ಮತ್ತೊಮ್ಮೆ ಪುಣೆ ತಂಡದ ಎದುರು ಮಿಂಚಲು ಸನ್ನದ್ಧರಾಗಿದ್ದಾರೆ. ಈ ಕುರಿತು ಮಾತನಾಡಿರುವ ಆರ್‌ಸಿಬಿ ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಟ್ರೆಂಟ್‌ ವುಡ್‌ಹಿಲ್‌, ನೆಟ್ಸ್‌ನಲ್ಲಿ ಕ್ರಿಸ್‌ ಭರ್ಜರಿ ಹೊಡೆತಗಳ ಮೂಲಕ ಚೆಂಡನ್ನು ಹೊಡೆದಿದ್ದಾರೆ. ಇದೇ ರೀತಿ ಪಂದ್ಯದಲ್ಲೂ ಆಡುತ್ತಾರೆಂಬ ಭರವಸೆ ಇದೆ ಎಂದಿದ್ದಾರೆ.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಮೂರರಲ್ಲಿ ಸೋಲು ಕಂಡಿದ್ದು, ಕೇವಲ ಒಂದರಲ್ಲಿ ಮಾತ್ರ ಗೆಲುವಿನ ಸಿಹಿ ಸವಿದಿದೆ. ಇಷ್ಟೇ ಪಂದ್ಯಗಳನ್ನು ಆಡಿರುವ ಪುಣೆ ಸಹ ಒಂದರಲ್ಲಿ ಜಯ ಹಾಗೂ ಮೂರರಲ್ಲಿ ಪರಾಭವಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದೇನಿಸಿದೆ.

ಪುಣೆ ತಂಡದಲ್ಲಿಯೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದರೂ ಪಂದ್ಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುತ್ತಿಲ್ಲ. ಇನ್ನು ಪುಣೆ ತಂಡಕ್ಕೆ ಬ್ಯಾಟಿಂಗ್‌ಗಿಂತ ಬೌಲಿಂಗ್‌ನಲ್ಲೇ ದೊಡ್ಡ ಚಿಂತೆಯಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಇಮ್ರಾನ್‌ ತಾಹೀರ್‌ ಹೊರತು ಪಡಿಸಿ ಮಿಕ್ಕ ಬೌಲರ್‌ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ.

ಇಂದಿನ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಇವೆ. ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಆರ್‌ಸಿಬಿಗೆ ಹೆಚ್ಚಿನ ಬಲ ತಂದಿದೆ. ತವರಿನಲ್ಲಿ ಆರ್‌ಸಿಬಿ ಆಟಗಾರರನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Leave a Comment