ಚಿದು ಪುತ್ರ ಕಾರ್ತಿ ನಿವಾಸದ ಮೇಲೆ ಇ.ಡಿ. ದಾಳಿ

ಚೆನ್ನೈ, ಜ.೧೩: ಕೇಂದ್ರದ ಹಣಕಾಸು ಖಾತೆ ಮಾಜಿ ಸಚಿವ ಪಿ. ಚಿದಂಬರಂ ಪುತ್ರ, ಉದ್ಯಮಿ ಕಾರ್ತಿ ಚಿದಂಬರಂ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐ.ಎನ್.ಎಕ್ಸ್. ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಮತ್ತು ದೆಹಲಿಯಲ್ಲಿನ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಾರ್ತಿ ಚಿದಂಬರಂ ಆಪ್ತರ ನಿವಾಸಗಳ ಮೇಲೆಯೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದ್ದ ಇ.ಡಿ. ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ಭಾಗವಾಗಿ ವಿವಿಧ ಕಡೆಗಳಲ್ಲಿ ಇಂದು ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಕಾರ್ತಿ ಚಿದಂಬರಂ ಮನೆಯಲ್ಲಿ ಇರಲಿಲ್ಲ. ಪರಿಶೀಲನೆ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ವಿಚಾರಣೆಗೆ ಹಾಜರಾಗುವಂತೆ ಕಾರ್ತಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಆದ್ದರಿಂದ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್ ೧ರಂದು ಜಾರಿ ನಿರ್ದೇಶನಾಲಯ ಇದೇ ಮಾದರಿಯ ದಾಳಿ ನಡೆಸಿ, ಕಾರ್ತಿ ಮತ್ತು ಅವರ ಸಂಬಂಧಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ನೇತೃತ್ವದ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ ೨೦೦೭ರಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅನುಮತಿ ನೀಡಿದ್ದರು. ಇದಕ್ಕಾಗಿ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ  ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದ ಎಫ್‌ಐಆರ್‌ನಲ್ಲಿ ಚಿದಂಬರಂ ಅವರನ್ನು ಆರೋಪಿಯನ್ನಾಗಿಸಿಲ್ಲ. ಆದರೆ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ವಿದೇಶಿ ಹೂಡಿಕೆ ಪ್ರಸ್ತಾವನೆ ಎಫ್‌ಐಎಬಿ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ, ಚಿದಂಬರಂ ಅವರ ಒತ್ತಡದ ಮೇಲೆ ಅನುಮತಿ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ೨೦೦೬ರಲ್ಲಿ ಏರ್‌ಸೆಲ್ ಸಂಸ್ಥೆಯನ್ನು ಮ್ಯಾಕ್ಸಿಸ್ ಸಂಸ್ಥೆ ಖರೀದಿಸುವ ಪ್ರಸ್ತಾವನೆಗೆ ಸಂಸತ್ತಿನ ಅನುಮತಿ ಪಡೆಯದೆ ಚಿದಂಬರಂ ಒಪ್ಪಿಗೆ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು.
ಕಾರ್ತಿ ಚಿದಂಬರಂ ಮನೆಯಲ್ಲಿ ಇ.ಡಿ. ಪರಿಶೀಲನೆ ನಡೆಸಿದೆ. ಆದರೆ ಯಾವೊಂದು ವಸ್ತುವನ್ನೂ ಜಪ್ತಿ ಮಾಡಿಲ್ಲ ಎಂದು ಕಾರ್ತಿ ಚಿದಂಬರಂ ಪರ ವಕೀಲ ಅರುಣ್ ನಟರಾಜನ್ ತಿಳಿಸಿದ್ದಾರೆ.

Leave a Comment