ಚಿದು, ಕಾರ್ತಿ ಜಾಮೀನು ವಿಸ್ತರಣೆ

ನವದೆಹಲಿ, ಆ ೭-ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಅ.೮ರವರೆಗೆ ವಿಸ್ತರಿಸಿದೆ.
ಏರ್ ಸೆಲ್ ಮತ್ತು ಮ್ಯಾಕ್ಸೆಸ್ ಹಗರಣ ಕುರಿತಂತೆ ಚಿದಂಬರಂ ಹಾಗೂ ಪುತ್ರನ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣಗಳನ್ನು ದಾಖಲಿಸಿದೆ. ಈಗ ಮಧ್ಯಂತರ ಅರ್ಜಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಅಪ್ಪ ಮತ್ತು ಪುತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಇಂದು ಅರ್ಜಿಯ ವಿಚಾರಣೆ ನಡೆಯಿತು. ಏರ್ ಸೆಲ್ ಮತ್ತು ಮ್ಯಾಕ್ಸಿಸ್ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಪ್ರಮುಖ ವಕೀಲರಿಗೆ ಹುಷಾರಿಲ್ಲ. ಇದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಮಾಡಿದ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿ ವಿಚಾರಣೆಯನ್ನು ಅ.೮ಕ್ಕೆ ಮುಂದೂಡಿದರು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ಕೆ.ಕೆ. ಗೋಯಲ್ ಮತ್ತು ನಿತೀಶ್ ರಾಣಾ ಹಾಜರಾಗಿ ಚಿದಂಬರಂ ತಮ್ಮ ವಕೀಲ ಹರ್ಷದೀಪ್‌ಸಿಂಗ್ ಸಲ್ಲಿಸಿರುವ ಅರ್ಜಿಗೆ ಉತ್ತರ ನೀಡಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಚಿದಂಬರಂ ಮತ್ತು ಪುತ್ರ ಕಾರ್ತಿಯವರ ಹೆಸರನ್ನು ಜುಲೈ ೧೯ರಂದು ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ವಿಶೇಷ ನ್ಯಾಯಾಧೀಶರ ಮುಂದೆ ಸಿಬಿಐ ಉಪ ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಜುಲೈ ೩೧ರಂದು ನಡೆಯಲಿದೆ.

Leave a Comment