ಚಿದುಗೆ ತಪ್ಪದ ಜೈಲುವಾಸ

ನವದೆಹಲಿ, ಸೆ. ೧೨- ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.

ಚಿದಂಬರಂ ಅವರನ್ನು ಮತ್ತೆ ಈ ತಿಂಗಳ 19ರವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಿ ದೆಹಲಿ ಹೈಕೋರ್ಟ್ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಸೆ. 23 ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಹೀಗಾಗಿ, ಇನ್ನೂ ಏಳು ದಿನಗಳ ಕಾಲ ಚಿದಂಬರಂ ಜೈಲಿನಲ್ಲೇ ಮುಂದುವರೆಯುವ ಅನಿವಾರ್ಯ ಸ್ಥಿತಿ ಎದುರಾಗಿದೆ. 2007ರಲ್ಲಿ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 305 ಕೋಟಿ ರೂ., ಐಎನ್‌ಎಕ್ಸ್ ಮಾಧ್ಯಮ ಸಂಸ್ಥೆಯಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅವರ ವಿರುದ್ಧ ಕೇಸು ದಾಖಲಿಸಿತ್ತು.

ನ್ಯಾಯಾಂಗ ಬಂಧನಕ್ಕೆ ವಹಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮತ್ತೆ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ,

ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆ. 21 ರಂದು ಅವರನ್ನು ದೆಹಲಿಯ ನಿವಾಸದಲ್ಲಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತು.

ಬಂಧನವಾದಾಗಿನಿಂದ ಇಲ್ಲಿಯತನಕ 5 ಬಾರಿ ಚಿದಂಬರಂ ಜಾಮೀನಿಗಾಗಿ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಐದು ಬಾರಿಯೂ ಅವರಿಗೆ ಹಿನ್ನೆಡೆಯಾಗಿದೆ. ಸದ್ಯ ಪಿ. ಚಿದಂಬರಂ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಚಿದಂಬರಂ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.

Leave a Comment