ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಹಿನ್ನಡೆ

ಚೆನ್ನೈ, ಆಗಸ್ಟ್ 22: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿಕೇಂದ್ರ ಮಾಜಿ ವಿತ್ತ ಸಚಿವ, ಗೃಹ ಸಚಿವ ಪಿ. ಚಿದಂಬರಂ ಅವರು ಬಂಧನಕ್ಕೊಳಗಾಗಿದ್ದಾರೆ. ಈ ನಡುವೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಆದಾಯ ತೆರಿಗೆ ವಂಚನೆ ಪ್ರಕರಣವೊಂದರಲ್ಲಿ ಹಿನ್ನಡೆಯುಂಟಾಗಿದೆ

ಐಟಿ ವಂಚನೆ ಕೇಸಿನಲ್ಲಿ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರದಂದು ಕೋರ್ಟ್ ತಿರಸ್ಕರಿಸಿದೆ.

ತಮಿಳುನಾಡಿನ ಮುತ್ತುಕಾಡು ಎಂಬಲ್ಲಿ ಜಮೀನು ಮಾರಾಟದ ಬಗ್ಗೆ ಕಾರ್ತಿ ಚಿದಂಬರಂ ಹಾಗೂ ಅವರ ಪತ್ನಿ ಐಟಿ ರಿಟರ್ನ್ಸ್ ವೇಳೆ ನಮೂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ 1.35 ಕೋಟಿ ರೂ. ನಗದು ಪಡೆದಿರುವ ಕಾರ್ತಿ ಚಿದಂಬರಂ ಅವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿದೆ.

ಮೊದಲಿಗೆ ಈ ಪ್ರಕರಣವನ್ನು ಚೆನ್ನೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೈಗೆತ್ತಿಕೊಂಡಿತ್ತು ನಂತರ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ವಿಶೇಷ ನ್ಯಾಯಾಲಯದಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಯಲಿದೆ.

ಆದರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ತಡೆ ಕೋರಿ ಕಾರ್ತಿ ಚಿದಂಬರಂ ಅವರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ‘ನಾನು ಸಂಸದನಾಗುವುದಕ್ಕೂ ಮುಂಚಿತವಾಗಿ ನಡೆದ ಘಟನೆ/ ವ್ಯವಹಾರ ಆಧಾರಿಸಿ ಪ್ರಕರಣ ದಾಖಲಾಗಿದೆ. ಹೀಗಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಏಕೆ ಎಂದು ಪ್ರಶ್ನಿಸಿದ್ದರು. ಕಾರ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

Leave a Comment