ಚಿತ್ರ: ಲೌಡ್ ಸ್ಪೀಕರ್ – ಆಧುನಿಕತೆಯ ತಳಮಳ ಅನಾವರಣ

ವಿಮರ್ಶೆ : ಚಿಕ್ಕನೆಟಕುಂಟೆ ಜಿ.ರಮೇಶ್

ನಿರ್ದೇಶನ:  ಶಿವ ತೇಜಸ್

ತಾರಾಗಣ : ಭಾಸ್ಕರ್ ನೀನಾಸಂ,ಅನುಷಾ, ಕಾವ್ಯ ಶಾ,ಅರವಿಂದ ರಾವ್,ದಿಶಾ, ರಂಗಾಯಣ ರಘು, ಮೋಹನ್ ಜುನೇಜಾ ಮತ್ತಿತರರು

ರೇಟಿಂಗ್ : ***

ವೀಕೆಂಡ್ ಪಾರ್ಟಿಯ ಮೋಜಿನಲ್ಲಿ ನಡೆಯುವ ಅನಾಹುತವನ್ನು ಬಂಡವಾಳವಾಗಿರಿಸಿಕೊಂಡು ಎಲ್ಲರ ಮುಖಗಳ ಮುಖವಾಡ ಅನಾವರಣ ಮಾಡಿರುವ ಚಿತ್ರ “ಲೌಡ್ ಸ್ಪೀಕರ್”. ತಂತ್ರಜ್ಞಾನ ಇರುವುದು ಸದುಪಯೋಗ ಪಡಿಸಿಕೊಳ್ಳಲಿಕ್ಕೆ ಹೊರತು ಅದನ್ನು ಕಬಳಿಸಿಕೊಂಡು ಅವಾಂತರಗಳನ್ನು ಮೈಮೇಲೆ ಎಳೆದುಕೊಳ್ಳಲು ಅಲ್ಲ. ಮೊಬೈಲ್ ಬಳಕೆ ಇತಿ ಮಿತಿಯಲ್ಲಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ಹೇಳುವ ಪ್ರಯತ್ನ ಮಾಡಿರುವ ನಿರ್ದೇಶಕ ಶಿವತೇಜಸ್, ಒಂದಷ್ಟು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ ವಾರಕ್ಕೆ ಏಳೆಂಟು ಸಿನಿಮಾಗಳು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಚಿತ್ರಮಂದಿರದಿಂದ ಬಂದಷ್ಟೇ ವೇಗವಾಗಿ ಕಾಣೆಯಾಗುತ್ತಿರುವ ಕಾಲಘಟ್ಟದಲ್ಲಿ ಯುವಜನರ ಆಟೋಟಗಳು,ಚೆಲ್ಲಾಟಗಳಿಗೆ ಕನ್ನಡಿ ಹಿಡಿದಿರುವ ನಿರ್ದೇಶಕರು ಅಗತ್ಯಕ್ಕಿಂತ ಹೆಚ್ಚಾಗಿ ಕಾಂಡೋಮ್,ಸೆಕ್ಸ್ ವಿಡಿಯೋ, ನಿಮಿರು ದೌರ್ಬಲ್ಯದ ವಿಷಯವನ್ನು ಮುಂದಿಟ್ಟುಕೊಂಡು ಹೊತ್ತಲ್ಲದ ಹೊತ್ತಿನಲ್ಲಿಯೂ ಕಲಾವಿದರನ್ನು ಮೂಡ್‌ಗೆ ಕರೆದೊಯ್ದಿದ್ದಾರೆ.

ಎಡಿಟಿಂಗ್ ಸಮಸ್ಯೆ,ಅನಗತ್ಯ ಸನ್ನಿವೇಶಗಳ ಹೊರತಾಗಿಯೂ ಚಿಕ್ಕದಾಗಿ ಚೊಕ್ಕವಾಗಿ ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಮಾಡಿದ್ದಾರೆ. ಅದರ ಸಂಪೂರ್ಣ ಶ್ರೇಯ ನಿರ್ದೇಶಕರಿಗೆ ಸಲ್ಲಬೇಕು.

ಸ್ನೇಹಿತ ಡಾ ಹರೀಶ್ ಮನೆಯಲ್ಲಿ ವೀಕೆಂಡ್ ಪಾರ್ಟಿಗೆ ಸೇರುವ ಮೂರು ದಂಪತಿಗಳು ಹಾಗು ಓರ್ವ ಸ್ನೇಹಿತ, ಇರಲಾರದೆ ಇವರೆ ಬಿಟ್ಟುಕೊಂಡರು ಎನ್ನುವ ಹಾಗೆ ಕುಡಿದ ಅಮಲಿನಲ್ಲಿ ಗೇಮ್ ಆಡಲು ಮುಂದಾಗುತ್ತಾರೆ. ಆ ಗೇಮ್ ಹೆಸರು ಕೇಳಿ ಒಲ್ಲದ ಮನಸ್ಸಿನಿಂದ ಎಲ್ಲರೂ ಆಟದಲ್ಲಿ ಭಾಗಿಯಾಗಲು ಸಮ್ಮತಿಸುತ್ತಾರೆ.

ಎಲ್ಲರಿಗೂ ಬರುವ ಫೋನ್‌ಗಳು ಮತ್ತು ಮೆಸೇಜ್‌ಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆನ್ನುವ ಅವರ ನಿಯಮದಿಂದ ಹೆಂಡತಿಗೆ ಗೊತ್ತಿಲ್ಲದೆ ಗಂಡ, ಗಂಡನಿಗೆ ಗೊತ್ತಿಲ್ಲದೆ ಹೆಂಡತಿ, ಹಾಗು ಸ್ನೇಹಿತನ ಮುಖವಾಡ ಕಳಚಿ ಬೀಳುತ್ತದೆ.

ಅಷ್ಟಕ್ಕೂ ಗೇಮ್ ಯಾವುದು, ಅದರಿಂದ ಏನೆಲ್ಲಾ ತೊಂದರೆ ತಾಪತ್ರೆ ಎದುರಿಸಬೇಕಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಸಲಿಂಗ ಕಾಮ, ವಿವಾಹೇತರ ಸಂಬಂಧ, ಯುವ ಜನರ ಹಾದಿ ತಪ್ಪುವ ವಿಷಯಗಳ ಮೂಲಕ ರಂಜಿಸುವ ಕೆಲಸ ಮಾಡಿದ್ದಾರೆ.

ಚಿತ್ರದ ಬಗ್ಗೆ ಒಂದಷ್ಟು ಕಾಳಜಿ ವಹಿಸಿದ್ದರೆ ಉತ್ತಮ ಮನರಂಜನಾತ್ಮಕ ಚಿತ್ರ ನೀಡಬಹುದಾದ ಅವಕಾಶವನ್ನು ಚಿತ್ರತಂಡ ಕೈಯಾರೆ ಕಳೆದುಕೊಂಡಿದೆ. ಅದರೂ ನೊಡಲು ಅಡ್ಡಿಯಿಲ್ಲ.

:ಭಾಸ್ಕರ್ ನೀನಾಸಂ,ಅನುಷಾ, ಕಾವ್ಯ ಶಾ,ಅರವಿಂದ ರಾವ್,ದಿಶಾ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ರಂಗಾಯಣ ರಘು ಉಪದೇಶ ಕಡಿಮೆಯಾಗಿದ್ದರೆ ಇನ್ನೂ ಚಿತ್ರ ಚೆಂದ ಕಾಣಿಸುತ್ತಿತ್ತು.

*-ಅಷ್ಟಕಷ್ಟೆ/ **- ಸುಮಾರು/ *** -ಪರವಾಗಲ್ಲ/  ****- ಉತ್ತಮ/   *****-ಅತ್ಯುತ್ತಮ

Leave a Comment