ಚಿತ್ರ ನಟಿ ಸಿನಿಮಾ ಮಾತ್ರ ಮಾಡಿಕೊಂಡಿರಬೇಕು

ನಟಿ ಹರ್ಷಿಕಾ ಪೂಣಚ್ಚಗೆ ಸಚಿವ ಸಾ.ರಾ.ಮಹೇಶ್ ಟಾಂಗ್​
ಮೈಸೂರು. ಜೂ. 16: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಹರ್ಷಿಕಾ ಯಾರು ? ಎಂದು ಪ್ರಶ್ನೆ ಮಾಡಿದ್ದಾರೆ.
ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ ? ಎಂದು ಪ್ರಶ್ನಿಸಿದ ಸಾರಾ ಮಹೇಶ್​, “ಹರ್ಷಿಕಾ ಸಿನಿಮಾ ನಟಿ. ಅವರು ಆ ಬಗ್ಗೆ ಮಾತ್ರ ಮಾತನಾಡಬೇಕು. ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾಗೆ ಏನು ಗೊತ್ತು? ಅವರ ವಿದ್ಯಾಭ್ಯಾಸದ ಹಿನ್ನೆಲೆ ಏನು‌? ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು,” ಎಂದಿದ್ದಾರೆ.
ಕೊಡಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ವಿಚಾರಕ್ಕೆ ಆನ್​ಲೈನ್​ನಲ್ಲಿ ಆಂದೋಲನ ಆರಂಭವಾಗಿದೆ. ಇದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕೂಡ ಬೆಂಬಲ ಸೂಚಿಸಿದ್ದರು. ಈ ವಿಚಾರದಲ್ಲಿಯೂ ಅವರಿಗೆ ಸಾರಾ ಮಹೇಶ್​ತಿರುಗೇಟು ನೀಡಿದ್ದಾರೆ.
“ಕೆಲವರಿಗೆ ಪ್ರಚಾರದ ಹುಚ್ಚು. ಹೀಗಾಗಿ ಅವರಿಗೆ ಇಷ್ಟ ಬಂದ ಹಾಗೇ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಅಭಿಯಾನ ಮಾಡುವುದಕ್ಕೆ ಅರ್ಥ ಇಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಹಂತದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಮುಂದೆ ಆಸ್ಪತ್ರೆ ಆದರೆ ನಮ್ಮ ಒತ್ತಡದಿಂದಲೇ ಕೆಲಸ ಆಯಿತು ಎಂದು ಹೇಳಿಕೊಳ್ಳುತ್ತಾರೆ‌” ಎಂದು ವ್ಯಂಗ್ಯವಾಡಿದರು.

Leave a Comment