ಚಿತ್ರಸಂತೆಗೆ ಚಾಲನೆ

ಬೆಂಗಳೂರು, ಜ. ೧೧- ಕರ್ನಾಟಕ ಚಿತ್ರಕಲಾ ಪರಿಷತ್, ಚಿತ್ರ ಕಲಾವಿದರು ಮತ್ತು ಶ್ರೀಸಾಮಾನ್ಯರ ನಡುವೆ ಸೇತುವೆಯಾಗಿ ಏರ್ಪಡಿಸುವ ಚಿತ್ರಸಂತೆ ಈ ಸಾಲಿನಲ್ಲಿಯೂ ಯಶಸ್ವಿಯಾಗಲಿ ಎಂದು ವಿಶ್ರಾಂತ ಯುನೆಸ್ಕೋ ರಾಯಭಾರಿ ಚಿರಂಜಿವಿ ಸಿಂಗ್ ಶುಭ ಹಾರೈಸಿದರು.
ಹಿರಿಯ ಕಲಾವಿದ ದಿ. ಯುಸೆಫ್ ಅರೆಕಲ್ ಅವರಿಗೆ ಈ ಸಾಲಿನಲ್ಲಿ ಸಮರ್ಪಿತವಾಗಿರುವ 14ನೇ ಚಿತ್ರಸಂತೆಯ ಪ್ರಯುಕ್ತ ನಗರದ ಚಿತ್ರಕಲಾಪರಿಷತ್‌ನಲ್ಲಿ ಏರ್ಪಡಿಸಿದ್ದ ಆಹ್ವಾನಿತ ಕಲಾವಿದರ ಕಲಾಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
1974 ರಲ್ಲಿ ಅಂದಿನ ಕಲಾ ಪ್ರದರ್ಶನವನ್ನು ವಿಧಾನಸೌಧದ ಬ್ಲಾಕ್ವೆಂಟ್ ಹಾಲ್‌ನಲ್ಲಿ ಉದ್ಘಾಟಿಸಿದ್ದೆ. 1973 ರಿಂದ ಪರಿಷತ್‌ನೊಂದಿಗೆ ತಮ್ಮ ಬಾಂಧವ್ಯವಿದೆ ಎಂದರು.
ಪರಿಷತ್ ಸ್ಥಾಪನೆಯಾದಾಗಿನಿಂದ ಇದುವರೆಗೆ ನಡೆದು ಬಂದಿರುವ ಇತಿಹಾಸವನ್ನು ನೆನಪಿಸಿಕೊಂಡ ಅವರು, ಪರಿಷತ್ ರಾಷ್ಟ್ರಮಟ್ಟದ ಕಲಾವಿದರನ್ನು ನೀಡಿದೆ. ಅದೇ ರೀತಿ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂದ ಅವರು, ಕರ್ನಾಟಕದ ಎಲ್ಲ ಭಾಗದ ಕಲೆಯನ್ನು ಪ್ರತಿನಿಧಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಪ್ರೊ. ಆರ್.ಬಿ. ಭಾಸ್ಕರನ್ ಅವರು, ಹಿರಿಯ ಕಲಾವಿದರಾದ ಪ್ರೊ. ಜಿ.ವಿ. ಅಂದಾನಿ, ಡಾ. ಪುಷ್ಪಾ ದ್ರಾವಿಡ್, ಸೂರಾಲು ವೆಂಕಟರಮಣಭಟ್ ಮತ್ತು ಗಾಯತ್ರಿ ದೇಸಾಯಿ ಅವರಿಗೆ ಈ ಸಂದರ್ಭದಲ್ಲಿ ಚಿತ್ರಕಾಲ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಅವರು, ಪರಿಷತ್ ತನ್ನ ಶಿಕ್ಷಣದಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಜೆ. ಕಮಲಾಕ್ಷಿ ಸ್ವಾಗತಿಸಿದರು.
ಮೊಟ್ಟೆ ಇಟ್ಟು ಮರಿ ಮಾಡಲು ದೂರದೂರಿನಿಂದ ಹಾರಿ ಬರುವ ಹಕ್ಕಿಗಳಂತೆ ದೇಶದ ವಿವಿಧೆಡೆಯಿಂದ ಬರುವ ಕುಂಚಕಲಾವಿದರ ಬಣ್ಣ ಬಣ್ಣದ ಚೆಲುವಿನ ಚಿತ್ತಾರಗಳ ಚಿತ್ರಸಂತೆ ಜ. 15 ರ ವರೆಗೆ ನಡೆಯಲಿದೆ.

Leave a Comment