ಚಿತ್ರಪ್ರದರ್ಶನಕ್ಕೆ ರಂಗಮಂದಿರ ಸೂಕ್ತವಲ್ಲ

ರಾಯಚೂರು.ಸೆ.11- ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ರಂಗಮಂದಿರದಲ್ಲಿ ಇತ್ತೀಚಿಗೆ ಸತತ 4 ದಿನ ಚಿತ್ರ ಪ್ರದರ್ಶನ ಏರ್ಪಡಿಸಿರುವುದಕ್ಕೆ ಅಲ್ತಾಫ್ ರಂಗಮಿತ್ರ ಸಂಘದ ಸದಸ್ಯರು ವಿರೋಧಿಸಿ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಕುಂದು – ಕೊರತೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸಮಸ್ಯೆ ಪರಿಶೀಲಿಸುವುದಾಗಿ ಎಡಿಸಿ ಹೇಳಿದರು. ಅರುಣ್ ಬಾಬು ಎಂಬ ದೂರುದಾರರು, ನಾನು ಮೆಕಾನಿಕಲ್ ಪದವೀಧರರಾಗಿದ್ದು, 2 ಕಾಲುಗಳ ಅಂಗವಿಕಲತೆ ಹೊಂದಿದ್ದು, ಕೆಪಿಟಿಎಸ್‌ನಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಉದ್ಯೋಗ ನೀಡುತ್ತಿಲ್ಲವೆಂದು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾದಲ್ಲಿ ಅಂಗವಿಕಲತೆಯಡಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಸಿರವಾರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಭಾಗ್ಯನಗರ ಕ್ಯಾಂಪ್‌ನಿಂದ ಶಾಖಾಪೂರು, ಗಣದಿನ್ನಿ ಗ್ರಾಮದ ಮುಖಾಂತರ ಹಾದು ಹೋಗುವ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ಸರಿಪಡಿಸಬೇಕೆಂದು ಗ್ರಾಮಸ್ಥ ಡಾ.ಸೋಮಶೇಖರ ರೆಡ್ಡಿ ದೂರು ನೀಡಿದರು.
ನಗರದ ಮಹಿಳಾ ವೃತ್ತಿಪರ ಹಾಸ್ಟೆಲ್‌ನಲ್ಲಿ ಸತತ 8 ವರ್ಷದಿಂದ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 2 ತಿಂಗಳ ಹಿಂದೆಯೇ ಏಕಾಏಕಿ ಅಧಿಕಾರಿ ತೆಗೆದಿದ್ದಾರೆ. ನನಗೆ ಅಡುಗೆ ಸಹಾಯಕಿ ಹುದ್ದೆ ಒದಗಿಸಿಕೊಡಬೇಕೆಂದು ಲಕ್ಷ್ಮೀಬಾಯಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ್ ನಾಯಕ, ಡಿಡಿಪಿಐ ಬಿ.ಕೆ.ನಂದನೂರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Comment