ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ ಕೇಂದ್ರ ಸಚಿವರಿಗೆ ಪತ್ರ

 

ದಾವಣಗೆರೆ, ಅಕ್ಟೋಬರ್ 10 : ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ವಲಯದ ರೈಲ್ವೆ ಪ್ರಯಾಣಿಕರ ಸಂಘ ಕೇಂದ್ರ ರೈಲ್ವೆ ಸಚಿವರನ್ನು ಒತ್ತಾಯಿಸಿದೆ.
ಉತ್ತರ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ನೇರ ರೈಲ್ವೆ ಮಾರ್ಗದ ಕಾಮಗಾರಿ ಕೆಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯೆಲ್‌ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ನೇರ ರೈಲು ಮಾರ್ಗದ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಬೆಂಗಳೂರು-ದಾವಣಗೆರೆ ನಡುವಿನ ಪ್ರಯಾಣದ ಅವಧಿ 65 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಆದ್ದರಿಂದ, ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಈ ರೈಲು ಮಾರ್ಗ ಪೂರ್ಣಗೊಂಡರೆ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ, ವಿಜಯಪುರ ನಡುವಿನ ಅಂತರ ಸಹ ಗಣನೀಯವಾಗಿ ಕಡಿಮೆಯಾಗಲಿದೆ. ಹೊಸ ಮಾರ್ಗ ನಿರ್ಮಾಣದಿಂದ ಬೆಂಗಳೂರು-ಚಿತ್ರದುರ್ಗ ಮಧ್ಯೆ ಅಂತರವು 110 ಕಿ. ಮೀ.ನಷ್ಟು ಕಡಿಮೆ ಆಗಲಿದೆ.
ರೈಲು ಮಾರ್ಗ ಪೂರ್ಣಗೊಂಡರೆ ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರವು ಶೇ 50ರಷ್ಟು ಕಡಿಮೆಯಾಗಲಿದೆ. ಶಿವಮೊಗ್ಗ-ಬೆಂಗಳೂರು ಮಧ್ಯೆ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದು ಸಂಘ ಪತ್ರದಲ್ಲಿ ಉಲ್ಲೇಖಿಸಿದೆ.
ಬೀರೂರು-ಅರಸೀಕೆರೆ ಮಾರ್ಗದಲ್ಲಿ ರೈಲು ಸಂಚಾರ ದಟ್ಟಣೆ ಕಡಿಮೆ ಆಗುವುದರಿಂದ ಹೆಚ್ಚಿನ ಮಟ್ಟದಲ್ಲಿ ಸರಕು ಸಾಗಾಣಿಕೆ ಗೂಡ್ಸ್ ರೈಲುಗಳಿಗೂ ಸಾಕಷ್ಟು ಅನುಕೂಲವಾಗುತ್ತದೆ. ಉದ್ದೇಶಿತ ರೈಲು ಮಾರ್ಗದ ಅವಶ್ಯಕತೆ ಪರಿಗಣಿಸಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.

Leave a Comment