ಚಿಗುರು; ವಿವಿಧ ಸ್ಪರ್ಧೆಗಳು ನಾಳೆ

ಹುಬ್ಬಳ್ಳಿ,ಫೆ.14- ಯೂಥ್‌ ಫಾರ್‌ ಸೇವಾ ಸಂಸ್ಥೆ ವತಿಯಿಂದ ಫೆ.16ರಂದು ಬೆಳಿಗ್ಗೆ 10ಕ್ಕೆ ವಿದ್ಯಾನಗರದ ಬಿವಿಬಿ ಆವರಣದಲ್ಲಿ ‘ಚಿಗುರು’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಚೇರಮನ್‌ ನಾಗರಾಜ ನಡಕಟ್ಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಆಯ್ದ 30 ಸರ್ಕಾರಿ ಶಾಲೆಯ 4ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 1050ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’. ‘ಕೆಎಲ್‌ಇ ಸಂಸ್ಥೆಯ ಕುಲಪತಿ ಅಶೋಕ ಶೆಟ್ಟರ್‌ ಉದ್ಘಾಟಿಸಲಿದ್ದು, ನಿಮ್ಹಾನ್ಸ್‌ ನಿರ್ದೇಶಕ ಡಾ.ಮಹೇಶ ದೇಸಾಯಿ, ವಿನಯ ಕಣಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಸದಸ್ಯ ವೀಣಾ ಭಟ್‌ ಮಾತನಾಡಿ, ‘ಓಟ, ಬ್ಯಾಡ್ಮಿಂಟನ್‌, ಯೋಗ, ರಂಗೋಲಿ, ರಸಪ್ರಶ್ನೆ, ಕಿರುನಾಟಕ, ಮಣ್ಣಿನ ಮಾದರಿಯ ರಚನೆ(ಕ್ಲೇ ಮಾಡ್ಲಿಂಗ್‌), ಕಸದಿಂದ ರಸ ಸೇರಿದಂತೆ 20 ಸ್ಪರ್ಧೆಗಳನ್ನು ನಡೆಸಲಾಗುವುದು. ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರಿಸ್ಟ್‌ ವಾಚ್‌, ದ್ವಿತೀಯ ಬಹುಮಾನ ಟ್ರಾವೆಲ್‌ ಬ್ಯಾಗ್‌ ಮತ್ತು ತೃತೀಯ ಬಹುಮಾನವಾಗಿ ಇಂಗ್ಲಿಷ್‌ ಮತ್ತು ಕನ್ನಡ ನಿಘಂಟು ಕೊಡಲಾಗುವುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.
ಸಂಸ್ಥೆಯ ಸದಸ್ಯ ಲಕ್ಷ್ಮಣ ಮಾತನಾಡಿ, ‘ಸರ್ಕಾರಿ ಶಾಲೆಗಳನ್ನೆ ಗುರಿಯಾಗಿಸಿಕೊಂಡು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅದರಲ್ಲಿ ಚಿಗುರು ದೊಡ್ಡ ಕಾರ್ಯಕ್ರಮ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಮಾಧುರಿ ಕಟಾವಕರ್‌, ಸಿಎ ಸಂತೋಷ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.

Leave a Comment