ಚಿಗುರಗಳ ಲೆಕ್ಕದಲ್ಲಿ ಫಲಾಫಲಗಳ ಲೆಕ್ಕಚಾರ

ತಿ.ನರಸೀಪುರ ಜ.14. ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಾಲ್ಕನೇ ದಿನವಾದ ನಿನ್ನೆ ಮೂಗೂರು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಚಿಗುರು ಕಡಿಯುವ ಕಾರ್ಯಕ್ರಮ ನಡೆಯಿತು.
ಚಿಗುರು ನೋಡಲು ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಕುತೂಹಲದಿಂದ ವೀಕ್ಷಿಸಿದರು.
ಹರಕೆ ಹೊತ್ತ ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ  ಬಾಯಿಬೀಗ, ಪಂಜಿನ ಸೇವೆ, ದೀವಟಿಗೆ  ಸೇವೆ ನೆರವೇರಿಸಿದರು.  ಭಕ್ತರು ತಮ್ಮ ರಾಸುಗಳನ್ನು ಸಿಂಗರಿಸಿ ಕೊಂಬಿಗೆ ಪಂಜನ್ನು ಕಟ್ಟಿ ದೇವಾಲಯದಿಂದ ಗ್ರಾಮದ ದೊಡ್ಡ ಕೆರೆಯರೆಗೆ ನಡೆದು ದೇವಿಗೆ ಪೂಜೆ ಸಲ್ಲಿಸುವ ಮುಖಾಂತರ ರಾಸುಗಳಿಗೆ ರೋಗ ರುಜಿನದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿದರು.
ಅಮ್ಮನವರು ಹೊಸಹಳ್ಳಿ ಗ್ರಾಮಕ್ಕೆ ದಯಮಾಡಿಸುವ ಪ್ರಮುಖ ರಸ್ತೆಗಳು ರಂಗೋಲಿ ತಳಿರು ತೋರಣಗಳಿಂದ ಸಿಂಗರಿಸಿದ್ದವು. ಜಾತ್ರಾ ವಿಶೇಷವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರೈತರು ತಾವು ಸಾಕಿದ ಗೌಜಲಹಕ್ಕಿಗಳನ್ನು ಹೊಸಹಳ್ಳಿ ಗ್ರಾಮದಲ್ಲಿ ಕಾಳಗ ನಡೆಸಿ ಪಂದ್ಯ ಕಟ್ಟಿ  ಗೆದ್ದಂತಹ ಹಕ್ಕಿಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.
ಮಧ್ಯಾಹ್ನ 3.30 ಗಂಟೆ ವೇಳೆಗೆ ವಿಶಿಷ್ಟ ಆಭರಣಗಳಿಂದ ಅಲಂಕೃತಗೊಂಡ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ಪಲ್ಲಕ್ಕಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರದಲ್ಲಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ಹೆಬ್ಬರ ಮೇಳದೊಂದಿಗೆ ಹೊಸಹಳ್ಳಿ ಗ್ರಾಮದ ಕೊಂಡ್ಯೊಯಲಾಯಿತು.
ಆ ನಂತರ ಭಕ್ತರ ಜೈಕಾರದ ಘೋಷಣೆಯೊಂದಿಗೆ ಸಂಜೆ 6 ಗಂಟೆ ವೇಳೆಗೆ  ಅರ್ಚಕರು ನೇರಳೆ ಮರನ್ನು ಏರಿ ಮರದಲ್ಲಿ ಮೂಡಿದ್ದ 11 ಚಿಗುರನ್ನು ಕೊಯ್ದು ಭಕ್ತರಿಗೆ ಪ್ರದರ್ಶಿಸಿದರು. ಕಳೆದ ಬಾರಿ 9 ಚಿಗುರು ಮೂಡಿತ್ತು. ಈ ಬಾರಿ 11 ಬಂದಿರುವುದು  ಜನರನ್ನು ಕೊಂಚ ವಿಚಲಿತರನ್ನಾಗಿ ಮಾಡಿದೆ.
11 ಚಿಗುರು ಮೂಡಿರುವುದನ್ನು ಕಣ್ತುಂಬಿಕೊಂಡ ಭಕ್ತರು ಮನದಲ್ಲೇ ದೇವಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಬೆಳ್ಳಿ ತಟ್ಟೆಯಲ್ಲಿ ಚಿಗುರನ್ನು ಇಟ್ಟು ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯೊಂದಿಗೆ ಮೂಗೂರು ಗ್ರಾಮದ ದೇವಾಲಯಕ್ಕೆ  ತಂದು ಪೂಜೆ ಸಲ್ಲಿಸಲಾಯಿತು.

Leave a Comment