ಚಿಕ್ಕತೊಟ್ಲುಕೆರೆಯಲ್ಲಿ ಸಂಕ್ರಾಂತಿ ಜಾತ್ರಾ ಮಹೋತ್ಸವ

ತುಮಕೂರು, ಜ. ೧೨- ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮದ ಅಟವೀ ಜಂಗಮ ಸುಕ್ಷೇತ್ರದಲ್ಲಿ ಜ. 15 ರಂದು ಬೆಳಿಗ್ಗೆ 10.30 ಗಂಟೆಗೆ ಮಕರ ಸಂಕ್ರಾಂತಿ ಉತ್ತರಾಯಣ ಪುಣ್ಯಕಾಲದ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ಅಟವೀ ಸಿದ್ಧಲಿಂಗಸ್ವಾಮಿಗಳ 69ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರದ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಅಟವೀ ಸ್ವಾಮಿ ಮಠದ ಮಹಾಕರ್ತೃಗಳ ಗದ್ದುಗೆಗಳಿಗೆ ಬೆಳಿಗ್ಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಶತಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯುವುದು. ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಆರತಿಯೊಂದಿಗೆ ಓಂಕಾರ ಶಿವಯೋಗಿಗಳು, ಅಟವೀ ಮಹಾಶಿವಯೋಗಿಗಳ ಉತ್ಸವವು ವಿವಿಧ ಜಾನಪದ ವಾದ್ಯಗಳೊಂದಿಗೆ ನೆರವೇರಲಿದೆ ಎಂದರು.

ಮಧ್ಯಾಹ್ನ 12.30 ಗಂಟೆಗೆ ಮಹಾದಾಸೋಹ, 3 ಗಂಟೆಯಿಂದ ಸಂಜೆವರೆಗೆ ಜಾನಪದ ಭಕ್ತಿಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

500 ವರ್ಷಗಳ ಹಿಂದೆ ಶ್ರೀ ಓಂಕಾರಸ್ವಾಮಿಗಳಿಂದ ಸ್ಥಾಪನೆಗೊಂಡ ಈ ಮಠ ನಾಲ್ಕು ಜನ ಸ್ವಾಮೀಜಿಗಳ ಪರಿಶ್ರಮದಿಂದ ಬೆಳೆದು 5ನೇ ಸ್ವಾಮೀಜಿಯಾಗಿ ತಾವು ಬಂದ ನಂತರ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.

ಸರ್ಕಾರದ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿ ಭವನ, ಮುಖ್ಯರಸ್ತೆಯಿಂದ ಮಠದ ವರೆಗೆ ಸುಮಾರು 1.5 ಕಿ.ಮೀ. ಉದ್ದ ಹಾಗೂ 30 ಅಡಿ ಸಂಪರ್ಕ ರಸ್ತೆ ನಿರ್ಮಿಸಿದ್ದು, ಇದಕ್ಕೆ ಸುಮಾರು 70 ಲಕ್ಷ ರೂ. ವೆಚ್ಚವಾಗಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟಿಸುವರು ಎಂದರು.

ಬೆಳ್ಳಾವಿ ಮಠದ ಶ್ರೀ ಕಾರದಬಸವ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಸಂಸದ ಎಸ್.ಪಿ.ಮುದ್ದಹನುಮೇಗೌಡರು, ಜಿ.ಪಂ., ತಾ.ಪಂ., ಗ್ರಾ.ಪಂ.ಚುನಾಯಿತ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುವರು ಎಂದರು.

ಶ್ರೀ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ನಿಸರ್ಗ ಪ್ರಕೃತಿ ಆಯುರ್ವೇದ ಆಸ್ಪತ್ರೆ ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದರು.

ಅಟವೀ ಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಟಿ.ಬಿ. ಶೇಖರ್, ಟ್ರಸ್ಟಿಗಳಾದ ಮಹದೇವಪ್ಪ, ಖಜಾಂಚಿ ಜಗದೀಶ್, ನಿರ್ದೇಶಕರಾದ ರಾಜೇಂದ್ರಪ್ರಸಾದ್, ದೇವರಾಜು, ಬೆಟ್ಟಯ್ಯ, ಪುಟ್ಟರಾಜು, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Comment