ಚಾಲಕನಿಲ್ಲದ ’ರಿಕ್ಷಾ ಅವಾಂತರ’

ಮಹಿಳೆಯರಿಬ್ಬರಿಗೆ ಗಾಯ
ಪುತ್ತೂರು, ಸೆ.೧೨- ಇಳಿಜಾರು ರಸ್ತೆಯಲ್ಲಿ ಚಾಲಕರೊಬ್ಬರು ನಿಲ್ಲಿಸಿ ಹೋಗಿದ್ದ ಅಟೋ ರಿಕ್ಷಾವೊಂದು ಏಕಾಏಕಿಯಾಗಿ ಚಲಿಸಿ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದು, ಬಳಿಕ ಪಾರ್ಕಿಂಗ್‌ನಲ್ಲಿದ್ದ ಎರಡು ರಿಕ್ಷಾಗಳಿಗೆ ಡಿಕ್ಕಿ ಹೊಡೆದು ನಿಂತ ಘಟನೆ ಪುತ್ತೂರು ನಗರದ ಪುರಭವನದ ಬಳಿ ನಿನ್ನೆ ಸಂಭವಿಸಿದೆ. ಈ ಘಟನೆಯಲ್ಲಿ ಮಹಿಳೆಯರಿಬ್ಬರು ಗಾಯಗೊಂಡದ್ದಲ್ಲದೆ ಎರಡು ರಿಕ್ಷಾಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ.
ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಂಗನವಾಡಿ ಶಿಕ್ಷಕಿ ಪರಮೇಶ್ವರಿ ಮತ್ತು ಅಡ್ಯನಡ್ಕದ ಅವ್ವಮ್ಮ ಗಾಯಗೊಂಡವರು. ತಲೆಯ ಭಾಗಕ್ಕೆ ಗಾಯವಾದ ಪರಮೇಶ್ವರಿ ಮತ್ತು ಸೊಂಟದ ಭಾಗಕ್ಕೆ ಗಾಯವಾದ ಅವ್ವಮ್ಮ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರಿನ ಪುರಭವನದ ಬಳಿ ಇಳಿಜಾರು ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಮುಂಡೂರು-ಕುರಿಯ ವ್ಯಾಪ್ತಿಯಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ರಿಕ್ಷಾ ಚಾಲಕ ಹಸೈನಾರ್ ಎಂಬವರು ರಿಕ್ಷಾವನ್ನು ಆ ಸ್ಥಳದಲ್ಲಿ ನಿಲ್ಲಿಸಿ ಚಕ್ರದಡಿಗೆ ಸಣ್ಣ ಕಲ್ಲೊಂದನ್ನು ತಡೆಯಾಗಿರಿಸಿ, ದೊಡ್ಡ ಗಾತ್ರದ ಕಲ್ಲನ್ನು ಹುಡುಕಾಡುತ್ತಿದ್ದ ವೇಳೆ ರಿಕ್ಷಾ ಏಕಾಏಕಿಯಾಗಿ ಇಳಿಜಾರು ರಸ್ತೆಯಲ್ಲಿ ಚಲಿಸಿಕೊಂಡು ಹೋದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪರಮೇಶ್ವರಿ ಮತ್ತು ಅವ್ವಮ್ಮ ಅವರಿಗೆ ರಿಕ್ಷಾ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ವೇಳೆ ರಸ್ತೆಗೆ ಬಿದ್ದು ಪರಮೇಶ್ವರಿ ಅವರ ತಲೆಗೆ ಗಾಯವಾಗಿದೆ. ಮಹಿಳೆಯರಿಬ್ಬರಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದ ರಿಕ್ಷಾ ಸರ್ಕಾರಿ ಆಸ್ಪತ್ರೆಯ ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ರಿಕ್ಷಾಗಳ ನಡುವಿನ ಭಾಗಕ್ಕೆ ತೆರಳಿ ಆ ಎರಡು ರಿಕ್ಷಾಗಳಿಗೆ ಡಿಕ್ಕಿ ಹೊಡೆದು ನಿಂತಿದೆ.
ತಾನು ಕಳೆದ ೨೪ ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ.ಆದರೆ ಈ ತನಕ ಯಾವುದೇ ಅಫಘಾತ ಘಟನೆ ನಡೆದಿಲ್ಲ. ಇಷ್ಟಾದುದು ದೇವರ ಕೃಪೆ. ಏನೋ ನನಗೆ ನಷ್ಟ ಬರುವುದಿತ್ತು ಎಂದು ರಿಕ್ಷಾ ಚಾಲಕ ಹಸೈನಾರ್ ಅವರು ತಿಳಿಸಿದ್ದಾರೆ.

Leave a Comment