ಚಾರ್ಮಾಡಿ ಘಾಟ್ ರಸ್ತೆ ತಡೆ ತೆರವು

ಸಂತ್ರಸ್ತರಿಗೆ ನೆರವಾದ ಶಾಸಕ-ಸಂಸದರು
ಉಜಿರೆ, ಜೂ.೧೩- ಗುಡ್ಡಕುಸಿತ, ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿ ಸಮಸ್ಯೆಗೆ ಸಿಲುಕಿದ್ದ ಪ್ರಯಾಣಿಕರಿಗೆ ಶಾಸಕ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ-ಸಂಘಪರಿವಾರದ ನೂರಾರು ಮಂದಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆಹಾರ ಪೊಟ್ಟಣ, ಬಿಸ್ಕತ್, ನೀರು, ಅಗತ್ಯ ಔಷಧಿಗಳನ್ನು ಕೊಟ್ಟಿಗೆಹಾರ ಮತ್ತು ಉಜಿರೆ ಕಡೆಯಿಂದ ಕೊಂಡೊಯ್ದು ಒದಗಿಸಿದ್ದಲ್ಲದೆ ಕೆಲವೆಡೆ ಆಹಾರವನ್ನು ಸ್ಥಳದಲ್ಲೇ ತಯಾರಿಸಿ ಸಂತ್ರಸ್ತರಿಗೆ ನೀಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿನ್ನೆ ಸಂಜೆ ಘಾಟ್ ರಸ್ತೆತಡೆಯನ್ನು ತೆರವುಗೊಳಿಸಿದ್ದರೂ ಇಂದು ಮತ್ತು ನಾಳೆ ೨ ದಿನಗಳ ಕಾಲ ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರವನ್ನು ತಡೆಹಿಡಿಯಲಾಗಿದೆ.
ಘಾಟ್‌ನ ವಿವಿಧೆಡೆ ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಗುಡ್ಡಕುಸಿತ ಉಂಟಾಗಿದ್ದು, ಅಲ್ಲಲ್ಲಿ ಭಾರೀ ಗಾತ್ರದ ಮರಗಳು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸಾರಿಗೆ ಬಸ್‌ಗಳ ಸಮೇತ ಅಂದಾಜು ೨೫೦ಕ್ಕೂ ಹೆಚ್ಚು ವಾಹನಗಳು ಎರಡೂ ಕಡೆಗಳಲ್ಲಿ ಸಾಲುಗಟ್ಟಿ ನಿಂತಿತ್ತು. ಇದರಿಂದ ೨೦೦೦ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರು ಖುದ್ದು ಘಟನಾಸ್ಥಳಕ್ಕೆ ದೌಡಾಯಿಸಿ ರಸ್ತೆತಡೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದರು. ಬೆಳ್ತಂಗಡಿ, ಮೂಡಿಗೆರೆ ಠಾಣೆಯ ಪೊಲೀಸರೂ ಘಟನಾಸ್ಥಳದಲ್ಲಿದ್ದು ರಸ್ತೆ ಮಧ್ಯೆ ಸಿಲುಕಿದ್ದವರಿಗೆ ನೆರವಾಗಿದ್ದಾರೆ. ಸ್ಥಳೀಯರು ಆಹಾರವನ್ನು ಅಲ್ಲಿಯೇ ತಯಾರುಮಾಡಿ ನೀಡುವ ಮೂಲಕ ಪ್ರಯಾಣಿಕರಿಗೆ ನೆರವಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜಾ ಅವರು ಪ್ರಯಾಣಿಕರಲ್ಲಿ ಧೈರ್ಯ ತುಂಬಿದ್ದರಲ್ಲದೆ ಕಾರ್ಯಾಚರಣೆ ಮುಂದುವರಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸೇವಾಕಾರ್ಯದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Leave a Comment