ಚಾಮುಂಡಿ ಬೆಟ್ಟ ಅನಧಿಕೃತ ಅಂಗಡಿ ತೆರವು

ಮೈಸೂರು, ಸೆ. ೧೨- ವ್ಯಾಪಾರಸ್ಥರ ವಿರೋಧದ ನಡುವೆಯೂ ಚಾಮುಂಡಿ ಬೆಟ್ಟದಲ್ಲಿಂದು ಕಂದಾಯ ಇಲಾಖೆ, ಗ್ರಾಮ ಠಾಣಾ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ ೨೫೦ಕ್ಕೂ ಹೆಚ್ಚು ಅಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
ಇಂದು ಮುಂಜಾನೆಯೆ ೫ ಜೆಸಿಬಿಗಳು ಹಾಗೂ ೩೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಡಿಸಿಪಿ ಮುತ್ತುರಾಜ್, ಎಸಿಪಿ ಲೋಕೇಶ್ ನೇತೃತ್ವದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಯಿತು.
ಚಾಮುಂಡಿ ಬೆಟ್ಟದ ದೇವಸ್ಥಾನದ ರಸ್ತೆಯನ್ನು ತಿರುಪತಿ ದೇವಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ದೇವಾಲಯದ ಸುತ್ತಮುತ್ತ ನಿರ್ಮಿಸಲಾಗಿದ್ದ ೨೫೦ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗುತ್ತಿದ್ದಂತೆಯೇ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ಅದನ್ನು ಲೆಕ್ಕಿಸದೇ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು.
ಕಳೆದ ೨ ದಿನದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಮಾಲೀಕರು ಅಂಗಡಿ ಮಳಿಗೆಗಳನ್ನು ತೆರವುಗೊಳಿಸದಂತೆ ಮನವಿ ಮಾಡಿದ್ದರು. ಆದರೆ ಭಕ್ತರ ಹಿತದೃಷ್ಟಿಯಿಂದ ಹಾಗೂ ದೇವಾಲಯದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲೇ ಇವರ ಮನವಿಯನ್ನು ತಿರಸ್ಕರಿಸಿದರು. ಇದರಿಂದ ಅಸಮಾಧಾನಗೊಂಡ ಅಂಗಡಿ ಮಾಲೀಕರು ಪ್ರತಿಭಟನೆ ಮಾರ್ಗ ಹಿಡಿದರು.
ನಿನ್ನೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರಕ್ಕೆ ಬಂದು ೩೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಮಳಿಗೆಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್ ಸೇರಿದಂತೆ ಪೊಲೀಸ್, ಕಂದಾಯ ಅಧಿಕಾರಿಗಳು ಹಾಜರಿದ್ದರು.

Leave a Comment