ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್

ಮೈಸೂರು, ಜುಲೈ 12 : ಚಾಮುಂಡಿ ಬೆಟ್ಟದಲ್ಲಿ ವೈಭವದಿಂದ ಎರಡನೇ ಆಷಾಢ ಶುಕ್ರವಾರ ಪೂಜೆ ನಡೆಯುತ್ತಿದೆ. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಸಹ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಿಗೆ ಹೂವುಗಳ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತಾದಿಗಳ ದಂಡೇ ಹರಿದು ಬಂದಿದ್ದು, ಚಾಮುಂಡಿ ದೇವಿಯ ದರ್ಶನ ಪಡೆದಿದ್ದಾರೆ. ನೂಕು ನುಗ್ಗಲು ತಡೆಯಲು ವಿಶೇಷ ಪೊಲೀಸ್ ಬಂದೋಬಸ್ತನ್ನೂ ನಿಯೋಜಿಸಲಾಗಿದೆ. ಇಂದು ಬೆಳಗ್ಗಿನಿಂದಲೇ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಹೋಮ ಹಾಗೂ ಪೂಜೆ ಸಲ್ಲಿಕೆಯಾಗುತ್ತಿದೆ.

ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ. ರವಿ ಸಹ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪವಿತ್ರ ಆಷಾಢ ಶುಕ್ರವಾರ ದೇವರ ದರ್ಶನ ಪಡೆದಿದ್ದೇನೆ. ರಾಜ್ಯದಲ್ಲಿ ವರುಣನ ಕೃಪೆಯಾಗಲಿ. ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಲಿ. ದೇವಿಯ ಕೃಪೆಯಿಂದ ಬಿಜೆಪಿ ಸರ್ಕಾರ ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.

Leave a Comment