ಚಾಮುಂಡಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಮೈಸೂರು: ಜು. ೨೦: ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆರಂಭವಾದ ವಾರ್ಷಿಕ ಆಷಾಢ ಮಾಸದ ವಿಶೇಷ ಪೂಜೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ನಾಡ ದೇವತೆಯ ದರ್ಶನ ಪಡೆದರು.

ಆಷಾಢದ ೪ ಶುಕ್ರವಾರಗಳಲ್ಲೂ ಈ ವಿಶೇಷ ಪೂಜೆ ನಡೆಯಲಿದ್ದು, ಇಂದು ಮೊದಲ ಶುಕ್ರವಾರ ಮುಂಜಾನೆ ೩.೩೦ಕ್ಕೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೇರವೇರಿಸಿ ತಾಯಿ ಚಾಮುಂಡಿಗೆ ಲಕ್ಷೀ ಸ್ವರೂಪದ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿತು.

ವಿಶೇಷ ಪೂಜೆ:

20mysph-photo-3ಆಷಾಢದ ಮೊದಲ ಶುಕ್ರವಾರ ಮುಂಜಾನೆ ೩ ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ನಾಡದೇವಿಯ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪ್ರಧಾನ ಅರ್ಚಕರಾದ ಡಾ. ಎನ್. ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಅರ್ಚನೆಗಳು ಜರುಗಲಿವೆ. ಬೆಳಿಗ್ಗೆ ೯.೩೦ಕ್ಕೆ ಮಹಾಮಂಗಳಾರತಿ ಇರುತ್ತದೆ. ಸಂಜೆ ೬.೩೦ ರಿಂದ ೭ ರವರೆಗೆ ಅಭಿಷೇಕ ಮಾಡಲಾಗುವುದು. ಮುಂಜಾನೆ ೫.೩೦ಕ್ಕೆ ಆರಂಭವಾದ ದೇವಿ ದರ್ಶನ ರಾತ್ರಿ ೧೧ ಗಂಟೆಯವರೆಗೂ ಮುಂದುವರೆಯಲಿದೆ.

ಈ ಅಲಂಕೃತ ದೇವಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟ ಹತ್ತುತ್ತಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಹ ಬೆಟ್ಟಕ್ಕೆ ಭೇಟಿ ನೀಡಿ ಆಷಾಢ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಆಷಾಢ ಶುಕ್ರವಾರ ಹೆಚ್ಚು ಭಕ್ತರ ಸಂಖ್ಯೆ ಏರಲಿದೆ. ಇದರಿಂದ ೩ ಸರತಿ ಸಾಲು ನಿರ್ಮಿಸಲಾಗುವುದು. ಧರ್ಮದರ್ಶನ, ೫೦ ರೂ. ಹಾಗೂ ೩೦೦ ರೂ. ಟಿಕೆಟ್ ನೀಡಿ ಚಾಮುಂಡಿಯ ದರ್ಶನ ಪಡೆಯಬಹುದಾಗಿದೆ.

ಈ ವರ್ಷವೂ ಹೆಲಿಪ್ಯಾಡ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿಂದ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಬೆಟ್ಟಕ್ಕೆ ಕರೆದೊಯ್ದು ವಾಪಸ್ ಕರೆ ತರುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಗಣ್ಯರಿಗೆ ಪಾಸ್ ಮೂಲಕ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯ ಹಮ್ಮಿಕೊಳ್ಳುವುದಿಲ್ಲ. ಆದರೆ ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ವೃದ್ಧಿಯಾಗುತ್ತದೆ ಎಂಬ ಬಲವಾದ ನಂಬಿಕೆ ಆಸ್ತಿಕರದ್ದಾಗಿದೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

Leave a Comment