ಚಾಕು ತೋರಿಸಿ ಸರಗಳವು ಮೂವರ ಸೆರೆ

ಬೆಂಗಳೂರು, ಫೆ. ೧೧- ಆಟೋಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಮಾಂಗಲ್ಯಸರ ದೋಚಿ ಪರಾರಿಯಾಗಿದ್ದ ಮೂವರು ಹಳೇಕಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ನಾಗವಾರದ ಸೈಫ್ ಖಾನ್ ಅಲಿಯಾಸ್ ಸಮ್ಮು (28), ಗೋವಿಂದಪುರದ ನಯಾಬ್ ರಸುಲ್ ಅಲಿಯಾಸ್ ನಯಾಬ್ (29) ಮತ್ತು ಹೆಗಡೆ ನಗರದ ಸಬ್ದಾರ್ ಅಹಮದ್ ಅಲಿಯಾಸ್ ನೀಗ್ರೋ (29) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 9.5 ಲಕ್ಷ ರೂ. ಮೌಲ್ಯದ 175 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಬ್ಬಾಳದ ಎರಡು ಸರಗಳ್ಳತನ, ಒಂದು ಸುಲಿಗೆ, 2 ಕನ್ನಗಳವು, 2 ದ್ವಿಚಕ್ರ ವಾಹನ ಕಳವು, ನಂದಿನಿ ಲೇಔಟ್‌ನ ಒಂದು ಸುಲಿಗೆ, ಜಾಲಹಳ್ಳಿಯ ಒಂದು ಸರಗಳವು, ಹೆಚ್.ಎ.ಎಲ್‌ನ ಒಂದು ಸುಲಿಗೆ ಸೇರಿ 12 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಆರೋಪಿಗಳು ಹಳೇಕಳ್ಳರಾಗಿದ್ದು, ಐಷಾರಾಮಿ ಜೀವನ ನಡೆಯಲು ಅಪರಾಧ ಕೃತ್ಯಕ್ಕೆ ಇಳಿದಿದ್ದರು. ಚಾಕು, ಮಚ್ಚು, ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ರಾತ್ರಿ, ಮುಂಜಾನೆ ವೇಳೆ ಕಳವು ಮಾಡಿದ ಬೈಕ್‌ಗಳಲ್ಲಿ ಸಂಚರಿಸುತ್ತ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ, ಸುಲಿಗೆ ಮಾಡುತ್ತಿದ್ದರು.
ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕಳವು ಮಾಡುತ್ತಿದ್ದುದ್ದಲ್ಲದೆ, ಒಂಟಿ ಮಹಿಳೆಯರ ಸರಗಳವು ಮಾಡಿ, ಪರಾರಿಯಾಗುತ್ತಿದ್ದು, ಹಿಂದೆ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರವೂ ಕಳವು ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಪೊಲೀಸ್ ಇನ್ಸ್‌ಪೆಕ್ಟರ್ ಖಾನ್, ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment