ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸವಿದೆ: ಮೇಮೋಲ್ ರಾಕಿ

ನವದೆಹಲಿ, ಡಿ 2 – ಭಾರತ ಮಹಿಳಾ ಫುಟ್ಬಾಲ್ ತಂಡ ನೇಪಾಳದಲ್ಲಿ ನಡೆಯುವ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಈ ಬಗ್ಗೆ ತಂಡದ ಮುಖ್ಯ ಕೋಚ್ ಮೇಮೋಲ್ ರಾಕಿ ಮಾತನಾಡಿದ್ದಾರೆ.

“ದಕ್ಷಿಣ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಫುಟ್ಬಾಲ್ ತಂಡ ಕಠಿಣ ಪರಿಶ್ರಮದೊಂದಿಗೆ ಪೂರ್ವ ಸಿದ್ಧತೆ ನಡೆಸಿದ್ದು, ನೇಪಾಳದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ಉಳಿಸಿಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

2010 ಹಾಗೂ 2016ರಲ್ಲಿ ಎರಡು ಬಾರಿ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಫುಟ್ಬಾಲ್ ಟೂರ್ನಿ ನಡೆಸಲಾಗಿತ್ತು. ಈ ಎರಡರಲ್ಲೂ ಭಾರತ ಚಿನ್ನದ ಪದಕ ಗೆದ್ದಿತ್ತು. ಒಂದು ವಾರದಿಂದ ಕೋಲ್ಕತಾದಲ್ಲಿ ತರಬೇತಿ ಪಡೆಯುತ್ತಿದ್ದ ತಂಡ ಭಾನುವಾರ ನೇಪಾಳಕ್ಕೆ ತೆರಳಿದೆ.

ನೇಪಾಳಕ್ಕೂ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಮೋಲ್ ರಾಕಿ, “ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರಾಬಲ್ಯ ಮುಂದುವರಿಸಲು ಭಾರತ ತಂಡ ಎದುರು ನೋಡುತ್ತಿದೆ. ಹಾಲಿ ಚಾಂಪಿಯನ್ ಆಗಿರುವ ನಾವು ಮತ್ತೊಮ್ಮೆ ಪ್ರಶಸ್ತಿ ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ,” ಎಂದು ಹೇಳಿದರು.

“ವರ್ಷವೀಡಿ ಕಠಿಣ ಅಭ್ಯಾಸ ನಡೆಸಿದ್ದೇವೆ ಹಾಗೂ ಉನ್ನತ ಶ್ರೇಣಿಯ ತಂಡಗಳ ಎದುರು ನಾವು ಹಲವು ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದೇವೆ. ಆದ್ದರಿಂದ, ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ನಾವು ಅರ್ಹರಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಒಂದು ವರ್ಷ ನಮ್ಮ ತಂಡದಿಂದ ಸಕಾರಾತ್ಮಕ ಫಲಿತಾಂಶ ಮೂಡಿಬಂದಿದೆ. 2019ರ ಸ್ಯಾಫ್ ಮಹಿಳಾ ಚಾಂಪಿಯನ್‍ಶಿಪ್ ಕೂಡ ಜಯಿಸಿದ್ದೇವೆ. ಇದೇ ವಿಶ್ವಾಸದಲ್ಲಿ ಕ್ರೀಡಾಕೂಟದಲ್ಲಿ ಅಭಿಯಾನ ಆರಂಭಿಸಲಿದ್ದೇವೆ.” ಎಂದು ಮೇಮೋಲ್ ರಾಕಿ ತಿಳಿಸಿದರು.

ಡಿಸೆಂಬರ್ 3, 5 ಮತ್ತು 7 ರಂದು ಮಾಲ್ಡೀವ್ಸ್, ಶ್ರೀಲಂಕಾ ಮತ್ತು ನೇಪಾಳ ವಿರುದ್ಧ ಭಾರತ ಸೆಣಸಲಿದೆ. ಫೈನಲ್ ಕಾದಾಟ ಡಿ.9 ರಂದು ಜರುಗಲಿದೆ.

Leave a Comment