ಚಳಿಯಲ್ಲಿ ನೀ ಇಲ್ಲದ ಮಳೆ

ಸ್ವಯಂಕೃಷಿ ಸಿನೆಮಾದ ನಂತರ ಸ್ಯಾಂಡಲ್‌ವುಡ್‌ನಿಂದ ಮರೆಯಾಗಿದ್ದ ಜನಾರ್ಧನ್ ಈಗ ಅಮೋಘ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ನೀ ಇಲ್ಲದ ಮಳೆ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.ಬಹುತೇಕ ಅಮೇರಿಕಾದಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ.

ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಅಮೋಘ್ ಅಭಿನಯಿಸಿದ್ದು,ಪೆರು ದೇಶದ ಚೆಲುವೆ ವ್ಯಾಲರಿ ಈ ಚಿತ್ರದಲ್ಲಿ ನಾಯಕಿಯಾಗಿರುವುದು ವಿಶೇಷ.ಚಿತ್ರವು ಮುಂದಿನ ವಾರ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ಶನಿವಾರ ಗ್ರೀನ್‌ಹೌಸ್‌ನಲ್ಲಿ ಪತ್ರಿಕಾಗೋಷ್ಟಿ ಕರೆಯಲಾಗಿತ್ತು.

ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಅಮೋಘ್ ಈ ಚಿತ್ರಕ್ಕೆ ೨೮ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ.ಅಮೆರಿಕಾದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ನಮ್ಮ ದೇಶದಿಂದ ಅಮೆರಿಕಾಗೆ ಸ್ಟಡಿ ಹಾಗೂ ಕೆಲಸಕ್ಕೆಂದು ಹೋದವರು ಯಾಕೆ ಕಣ್ಮರೆಯಾಗುತ್ತಿದ್ದಾರೆ,ಅದಕ್ಕೆ ಕಾರಣಗಳೇನು ಎಂದು ಸಾಕಷ್ಟು ರೀಸರ್ಚ್ ಮಾಡಿ ಕಥೆಯಲ್ಲಿ ಅಳವಡಿಸಿಕೊಂಡೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದು, ಉತ್ತಮ ಸಂದೇಶ ಕೂಡ ಇದೆ. ಕರ್ನಾಟಕದ ಬೀದರ್, ಬಾಗಲಕೋಟೆ ಮುಂತಾದ ಕಡೆಗಳಲ್ಲಿಯೂ ಚಿತ್ರೀಕರಣ ನಡೆಸಿದ್ದೇವೆ ಎಂದು ವಿವರ ನೀಡಿದರು.ಈ ಚಿತ್ರದ ೫ ಹಾಡುಗಳಿಗೆ ಇಂದ್ರಸೇನಾ ಸಂಗೀತ ನೀಡಿದ್ದಾರೆ.

ಬಾಯ್ ಫ್ರೆಂಡ್ ಚಿತ್ರದಿಂದಲೂ ಜನಾದನ್ ಜೊತೆ ಇಂದ್ರಸೇನಾ ಕೆಲಸ ಮಾಡಿದ್ದಾರೆ.  ನಿರಂಜನ ಬಾಬು ಈ ಚಿತ್ರದ ಛಾಯಾಗ್ರಾಹಕರು. ಬೀದರ್ ಕ್ಷೇತ್ರದ ಬಿಜೆಪಿ ಸ್ಪರ್ಧಿಯಾಗಿದ್ದ ಶೈಲೇಂದ್ರ ಕೆ. ಬೆಲ್ದಾಳ್ ಹಾಗೂ ದೇವರಾಜ್ ಶಿಡ್ಲಘಟ್ಟ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಈ ಚಿತ್ರದ ನಾಯಕಿ ವ್ಯಾಲರಿ ಮಾತನಾಡಿ ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಥರದ ಪಾತ್ರ. ಈ ಹಿಂದೆ ಪೆರುವಿನಲ್ಲಿ ಒಂದಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೆ. ಅಲ್ಲದೆ ತಮಿಳಲ್ಲಿಯೂ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಿರುವುದು ಇದೇ ಮೊದಲು ಎನ್ನುತ್ತಾರೆ.

ನೀ ಇಲ್ಲದ ಮಳೆ ಚಿತ್ರದಲ್ಲಿ ಅಮೆರಿಕನ್ ಭಾಷೆಯನ್ನು ಕೆಲ ಸಂದರ್ಭಗಳಲ್ಲಿ ಬಳಸಲಾಗಿದೆ. ನಾಯಕಿಯ ತಂದೆಯ ಪಾತ್ರದಲ್ಲಿ ಹಿರಿಯ ನಟ ಗಿರೀಶ್ ಕಾರ್ನಾಡ್ ಹಾಗೂ ತಾಯಿಯ ಪಾತ್ರದಲ್ಲಿ ನಟಿ ಭವ್ಯ ಅವರು ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ತಬಲಾ ನಾಣಿ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಕಥೆ ಅವರ ಪಾತ್ರದ ಮೇಲೆ ಸಾಗುತ್ತದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜನಪದ ಗಾಯಕ ಆಲೂರು ನಾಗಪ್ಪ ಮಾತನಾಡಿ ನಾನು ಚಿತ್ರವನ್ನು ನೋಡಿದ್ದೇನೆ. ಚಿತ್ರದಲ್ಲಿ ಜನಜಾಗೃತಿ ಮೂಡಿಸುವಂಥ ಒಳ್ಳೆಯ ಅಂಶಗಳಿವೆ ಎಂದು ಹೇಳಿದರು. ನಿರ್ಮಾಪಕರ ಸ್ನೇಹಿತ ನಿವೃತ್ತ ಎಸ್.ಪಿ. ನಾಗರಾಜ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿ ಮಾತನಾಡುತ್ತ ನಾನು ಕೂಡ ಈ ಚಿತ್ರದ ಹಾಡುಗಳನ್ನು ಕೇಳಿದ್ದೇನೆ.

ತುಂಬಾ ಚೆನ್ನಾಗಿವೆ. ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ಕಥೆ ಚಿತ್ರದಲ್ಲಿದೆ ಎಂದು ಸ್ನೇಹಿತ ದೇವರಾಜ್ ಹೇಳಿದ್ದಾರೆ ಎಂದು ಹೇಳಿದರು. ನೀ ಇಲ್ಲದ ಮಳೆ ಚಿತ್ರವು ಈಗಾಗಲೇ ಸೆನ್ಸಾರ್‌ನಲ್ಲಿ  ಪಾಸಾಗಿದ್ದು ಎ ಪ್ರಮಾಣ ಪತ್ರ ಪಡೆದಿದೆ. ಚಿತ್ರವನ್ನು ಅಮೆರಿಕಾ, ಪೆರು ಮೊದಲಾದ ದೇಶಗಳಲ್ಲಿಯೂ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

Leave a Comment