ಚಲಿಸುತ್ತಿದ್ದ ಬಸ್‌ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಕುಂದಾಪುರ, ಜ.೧೦- ಚಲಿಸುತ್ತಿದ್ದ ಖಾಸಗಿ ವೇಗದೂತ ಬಸ್ಸಿನಲ್ಲಿ ತಮಿಳುನಾಡು ಮೂಲದ ಕಾರ್ಮಿಕ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ವೇಳೆ ಕಟ್‌ಬೆಲ್ತೂರು ಎಂಬಲ್ಲಿ ನಡೆದಿದೆ.
ವಿಷ ಸೇವಿಸಿ ಗಂಭೀರ ಪರಿಸ್ಥಿತಿಯಲ್ಲಿದ್ದ ರಾಜ್‌ಕುಮಾರ್(೩೫) ಹಾಗೂ ಪತ್ನಿ ಸಂಗೀತಾ(೨೭) ಎಂಬವರನ್ನು ಚಾಲಕ ಇಕ್ಬಾಲ್, ಬಸ್‌ಗೆ ಎಲ್ಲೂ ನಿಲುಗಡೆ ನೀಡದೆ ಕೆಲವೇ ಕ್ಷಣಗಳಲ್ಲಿ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಬಳಿಕ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಇದ್ದ ಒಂದೂವರೆ ವರ್ಷದ ಗಂಡು ಮಗು ಮೇಲ್ ಮುರುಗನ್‌ನನ್ನು ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೊಲ್ಲೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ಸಿ ನಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ತಮಿಳುನಾಡು ಮೂಲದ ದಂಪತಿ, ಮಗು ಸಹಿತ ಪ್ರಯಾಣಿಸುತ್ತಿದ್ದರು. ಕೊಲ್ಲೂರಿನಲ್ಲಿ ಬಸ್ ಹತ್ತಿದ್ದ ಇವರು, ಹಿಂದಿನ ಸೀಟಿನಲ್ಲಿ ಕುಳಿತಿದ್ದು, ವಂಡ್ಸೆ ಬಳಿ ಇವರು ತಮ್ಮಲ್ಲಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಇವರು, ಕಟ್‌ಬೆಲ್ತೂರು ಸಮೀಪ ಸೀಟಿನಿಂದ ಕೆಳಕ್ಕೆ ಬಿದ್ದು ನರಳಾಡುತ್ತಿದ್ದು, ಇದರಿಂದ ಇವರು ವಿಷ ಸೇವಿಸಿರುವ ವಿಚಾರ ಇತರ ಪ್ರಯಾಣಿಕರ ಗಮನಕ್ಕೆ ಬಂತು. ಈ ವೇಳೆ ಇಬ್ಬರೂ ಕೂಡ ಪ್ರಜ್ಞೆ ಕಳೆದು ಕೊಂಡರೆಂದು ತಿಳಿದುಬಂದಿದೆ. ಇದನ್ನು ನೋಡಿದ ನಿರ್ವಾಹಕ ಚಾಲಕನಿಗೆ ಮಾಹಿತಿ ನೀಡಿದ್ದು, ಕೂಡಲೇ ಇವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಯಿತು. ತಮಿಳುನಾಡು ಚೆನ್ನೈ ಸಮೀಪದ ಸೆಲ್ವಂ ಜಿಲ್ಲೆಯ ಕಾರ್ಮಿಕರಾಗಿರುವ ಇವರು, ಉಡುಪಿ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ ಬಳಿ ಜೋಪಡಿ ಯಲ್ಲಿ ವಾಸವಾಗಿದ್ದಾರೆ. ೧೫ ದಿನಗಳ ಹಿಂದೆಯಷ್ಟೆ ಇವರು ತಮಿಳು ನಾಡಿನಿಂದ ಉಡುಪಿಗೆ ಬಂದಿದ್ದರು. ರಾಜ್‌ಕುಮಾರ್‌ಗೆ ಮದ್ಯ ಸೇವನೆಯ ಚಟವಿದ್ದು, ಗಂಡ ಹೆಂಡತಿ ಮಧ್ಯೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ಇವರಿಗೆ ಕೆಲಸ ವಹಿಸಿಕೊಟ್ಟಿರುವ ಮೇಸ್ತಿ ಬಾಬು ತಿಳಿಸಿದ್ದಾರೆ. ವಿಷ ಸೇವನೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಮಗುವಿಗೂ ವಿಷ ಕುಡಿಸಿರಬಹುದೆಂಬ ಶಂಕೆಯಲ್ಲಿ ಮಗುವಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ದಂಪತಿ ವಿಷ ಸೇವಿಸಿರುವ ವಿಚಾರ ನಿರ್ವಾಹಕ ಸತೀಶ್, ಚಾಲಕ ಇಕ್ಬಾಲ್‌ಗೆ ತಿಳಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಚಾಲಕ ಪ್ರಯಾಣಿಕರನ್ನು ಇಳಿಸದೆ ಬಸ್ಸನ್ನು ಎಲ್ಲೂ ನಿಲ್ಲಿಸದೆ ದಂಪತಿಯ ಪ್ರಾಣ ಉಳಿಸಲು ಅತೀವೇಗದಿಂದ ಬಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು ೧೫ ಕಿ.ಮೀ. ದೂರದ ಕಟ್‌ಬೆಲ್ತೂರಿನಿಂದ ಬಸ್‌ನ್ನು ವೇಗದಿಂದ ಚಲಾಯಿಸಿಕೊಂಡು ಬಂದು ಕೆಲವೇ ಕ್ಷಣದಲ್ಲಿ ಕುಂದಾಪುರ ತಲುಪುವ ಮೂಲಕ ಚಾಲಕ ಸಾಹಸ ಮೆರೆದರು. ಬಳಿಕ ದಂಪತಿಯನ್ನು ಜಿಲ್ಲಾಸ್ಪತ್ರೆಗೆ ವರ್ಗಾಯಿಸುವ ವೇಳೆ ಚಾಲಕ ಇಕ್ಬಾಲ್, ಅವರ ಮಗುವನ್ನು ಎತ್ತಿಕೊಂಡು ಅದೇ ಅಂಬ್ಯುಲೆನ್ಸ್‌ನಲ್ಲಿ ಉಡುಪಿಗೆ ತೆರಳಿದರು. ಆಪತ್ಭಾಂಧವನಾಗಿ ಬಂದ ಚಾಲಕ ಇಕ್ಬಾಲ್ ಅವರ ಸಮಯಪ್ರಜ್ಞೆ ಹಾಗೂ ಸಾಹಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment