ಚಪಾಕ್​ ಚಿತ್ರದ ರೇಟಿಂಗ್​ ಕಡಿಮೆ ಮಾಡಬಹುದು, ನನ್ನ ಮನಸ್ಸು ಬದಲಾಯಿಸಲು ಸಾಧ್ಯ ಇಲ್ಲ – ದೀಪಿಕಾ

 

ನವದೆಹಲಿ: ನನ್ನ ಚಪಾಕ್ ಚಿತ್ರದ ರೇಟಿಂಗ್ ಕಡಿಮೆ ಮಾಡಬಹುದು ಆದರೆ ನನ್ನ ಮನಸ್ಸನ್ನು ಅವರಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ನಟಿ ದೀಪಿಕಾ ಪಡುಕೋಣೆ ತಮ್ಮ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳಿಗೆ ನಟಿ ದೀಪಿಕಾ ಬೆಂಬಲ ನೀಡಿದ ನಂತರ ಅವರ ಚಪಾಕ್ ಚಿತ್ರ ವೀಕ್ಷಿಸದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಯಾನ ನಡೆಸಿದರು. ಇದರಿಂದ ಚಪಾಕ್ ಚಿತ್ರದ ರೇಟಿಂಗ್ ಅಲ್ಪ ಮಟ್ಟದಲ್ಲಿ ಕುಸಿಯಿತು.

ಅಭಿಯಾನ ನಡೆಸುತ್ತಿದ್ದವರಿಗೆ ನಟಿ ದೀಪಿಕಾ ಅವರು ಅಭಿಮಾನಿಗಳ ಕ್ಲಬ್ ಟ್ವಿಟ್ಟರ್ನಲ್ಲಿ ಉತ್ತರ ನೀಡಿದ್ದಾರೆ. ನನ್ನ ಸಿನಿಮಾದ ರೇಟಿಂಗ್ ಅನ್ನು ನೀವು ಕಸಿಯಬಹುದು. ಆದರೆ ನನ್ನ ಮನಸ್ಸು ಬದಲಾಯಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿನಿಮಾದ ರೇಟಿಂಗ್ ಕಡಿಮೆಯಾದರೂ ಚಿತ್ರ ವಿಮರ್ಶಕರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ನೀಡಿದ್ದಾರೆ. ಮೇಘನಾ ಗುಲ್ಜಾರ್ ಚಿತ್ರ ನಿರ್ದೇಶಿಸಿದ್ದಾರೆ. ಆಸಿಡ್ ದಾಳಿಗೆ ತುತ್ತಾದ ಯುವತಿಯ ನೈಜ್ಯ ಘಟನೆ ಸಿನಿಮಾದ ಕತೆ. ಆಸಿಡ್ ದಾಳಿಯ ನಂತರ ಆಕೆ ಕಟ್ಟಿಕೊಂಡ ಬದುಕು ಎಲ್ಲರಿಗೂ ಸ್ಫೂರ್ತಿಯಾಗುತ್ತದೆ.

ಚಪಾಕ್ ಚಿತ್ರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಎರಡು ವಾರಗಳಲ್ಲಿ 34.03 ಕೋಟಿ ರೂ. ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ 13.03 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ಅಂದಾಜು 35 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಆಡಿಯೋ ಹಕ್ಕನ್ನು 3 ಕೋಟಿ ರೂ. ಹಾಗೂ ಸಿನಿಮಾದ ಉಪಗ್ರಹ ಹಕ್ಕನ್ನು 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ದೀಪಿಕಾ ಅವರ ಸ್ವಂತ ನಿರ್ಮಾಣದಲ್ಲಿ ಚಿತ್ರ ತಯಾರಾಗಿದೆ. ಹೀಗಾಗಿ ಚಿತ್ರ ನಷ್ಟ ಅನುಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Comment