’ಚಕ್ರವರ್ತಿಯಾದ ದರ್ಶನ್

-ಚಿಕ್ಕನೆಟಕುಂಟೆ ಜಿ.ರಮೇಶ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರಚಕ್ರವರ್ತಿಯ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು,ಚಿತ್ರೀಕರಣದ ನಂತರದ ಕೆಲಸ ಕಾರ್ಯಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.
’ಸಾರಥಿ’ ಚಿತ್ರದ ಬಳಿಕ ದರ್ಶನ್,ದೀಪಾಸನ್ನಿಧಿ ಜೋಡಿ ಜೊತೆಯಾಗಿ ನಟಿಸಿರುವ ಚಿತ್ರ ಇದು.ದರ್ಶನ್ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಎ.ವಿ ಚಿಂತನ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ದಿನಕರ್ ತೂಗದೀಪ ಚೊಚ್ಚಲ ಬಾರಿಗೆ ಸಹೋದರನೊಂದಿಗೆ ತೆರೆಯ ಮೇಲೆ ಮುಖಾಮುಖಿಯಾಗಿದ್ದಾರೆ. ನಟ ಸಿದ್ಧಾಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಅವರೊಂದಿಗೆ ಅಣಜಿನಾಗರಾಜ್ ಕೈಜೋಡಿಸಿದ್ದಾರೆ. ದರ್ಶನ್ ಅವರೊಂದಿಗೆ ೯ ಮಂದಿ ನಟರು ನಟಿಸಿರುವ ಚಿತ್ರ ಎನ್ನುವ ಹೆಗ್ಗಳಿಕೆವೊಂದಿದೆ.
ಎಲ್ಲದಕ್ಕಿಂತ ಮಿಗಿಲಾಗಿ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರೂ ನಟರೇ ಎಂದು ಪ್ರೀತಿ ಅಭಿಮಾನ ತೋರಿದ ದರ್ಶನ್ ಸರಳತೆಗೆ ಮಾರುಹೋಗಿರುವ ನಟರಾದ ಕುಮಾರ್ ಬಂಗಾರಪ್ಪ, ಸೃಜನ್‌ಲೋಕೇಶ್, ಆದಿತ್ಯಾ, ಯಶಸ್,ಶರತ್ ಲೋಹಿತಾಶ್ವ ಹಾಗು ಹಿರಿಯ ಕಲಾವಿದ ಹರೀಶ್ ರೈ ಮತ್ತಿತರರು ಮೆಚ್ಚುಗೆಯ ಮಾಹಾಪೂರವನ್ನೇ ಹರಿಸಿ,ನಿಮ್ಮಿಂದ ಇನ್ನೂ ಹತ್ತಾರು ಕಲಾವಿದರಿಗೆ ಉಪಯೋಗವಾಗಲಿ. ಚಿತ್ರರಂಗಕ್ಕೆ ನಿಜವಾದ ’ಚಕ್ರವರ್ತಿ ನೀವೇ ಎಂದು ಜೈಕಾರ ಹಾಕಿದರು.
ಮಹೂರ್ತದ ಬಳಿಕ ’ಚಕ್ರವರ್ತಿಯ ತಂಡ ಧ್ವನಿಸುರುಳಿ ಬಿಡುಗಡೆಗಾಗಿ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ಚಾನೆಲ್‌ಗಳ ಕ್ಯಾಮರಾಮನ್‌ಗಳಿಂದ ಧ್ವನಿ ಸುರುಳಿ ಬಿಡುಗಡೆ ಮಾಡಿಸುವ ಮೂಲಕ ತಾವು ಎಲ್ಲರಂತಲ್ಲ ಎನ್ನುವುದನ್ನು ದರ್ಶನ್ ಸಾಬೀತು ಮಾಡಿದರು.
ಬಳಿಕ ಚಿತ್ರದ ಕುರಿತು ವಿವರ ನೀಡಿದ ದರ್ಶನ್, ಚಕ್ರವರ್ತಿಗೆ ಮೊದಲು ಬೇರೆ ನಿರ್ಮಾಪಕರಿದ್ದರು. ಚಿತ್ರೀಕರಣ ವಿಳಂಬ ಮಾಡಿದರು. ಸುಮ್ಮನೆ ಮನೆಯಲ್ಲಿರಬೇಕೆಲ್ಲ ಎಂದುಕೊಂಡಾಗ ಸಿಕ್ಕವರು ಗೆಳೆಯ ಅಣಜಿ ನಾಗರಾಜ್, ಆಗ ನಿರ್ಮಾಪಕ ಸಿದ್ಧಾಂತ್ ಅವರನ್ನು ಪರಿಚಯಿಸಿದರು. ಅಲ್ಲಿಂದ ಆರಂಭವಾದ ಚಿತ್ರ ಬೆಂಗಳೂರು,ಮೈಸೂರು,ಸಕಲೇಶಪುರ, ಸಿಂಗಪೂರ್, ಮಲೇಶಿಯಾ ಸೇರಿದಂತೆ ೧೨೦ ಚಿತ್ರೀಕರಣ ನಡೆಸಿದೆ. ಮೊಬೈಲ್ ಕ್ಯಾಮರ ಬಿಟ್ಟು ಎಲ್ಲಾ ಮಾದರಿಯ ಕ್ಯಾಮರಗಳಲ್ಲಿ, ರೈಲು ಬಿಟ್ಟು ಸಮುದ್ರದ ಮೇಲೆ, ವಿಮಾನದಲ್ಲಿ ಕ್ರೂಸರ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.

೧೯೮೦ ರಿಂದ ೨೦೧೬ರ ನಡುವಿನ ಕಾಲಘಟ್ಟವನ್ನು ಚಿತ್ರೀಕರಣ ಮಾಡಲಾಗಿದೆ. ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ. ಮೂರು ರೀತಿಯ ಪಾತ್ರಗಳನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿತ್ತು. ಒದೊಂದು ಪಾತ್ರಕ್ಕೂ ಒಂದೊಂದು ರೀತಿ ತಯಾರಾಗಬೇಕಾಗಿತ್ತು. ಇದಕ್ಕಾಗಿ ಸ್ವಲ್ಪ ತಡವಾಯಿತು. ಚಿತ್ರದಲ್ಲಿ ನಾನು ಸೇರಿದಂತೆ ಒಂಭತ್ತು ನಟರಿದ್ದಾರೆ ಎಲ್ಲರೂ ಸ್ಟಾರ್‌ಗಳೇ. ನೈಜತೆ ಮತ್ತು ಕಾಲ್ಪನಿಕ ಕಥೆಯನ್ನು ಚಿಂತನ್ ಸಿದ್ದಮಾಡಿದ್ದು ಮನರಂಜನೆಯ ರಸದೌತಣ ನೀಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭರವಸೆ ನೀಡಿದರು.
ಚಿತ್ರದ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ತರಾತುರಿಯಲ್ಲಿ ಬಿಡುಗಡೆ ಮಾಡದೆ ಮಾರ್ಚ್‌ನಲ್ಲಿ ತೆರೆಗೆ ತರುವ ಉದ್ದೇಶವಿದೆ. ಮುಂದಿನ ತಿಂಗಳು ಮಿಲನ ಪ್ರಕಾಶ್ ಅವರ ಹೊಸ ಚಿತ್ರ ಆರಂಭವಾಗುತ್ತಿದೆ. ಈ ವರ್ಷದಲ್ಲಿಯೇ ಚಿತ್ರ ತೆರೆಗೆ ಬರಲಿದೆ. ನೋಟು ಅಮಾನ್ಯದ ಎಫೆಕ್ಟ್‌ನಿಂದ ಕೆಲಸವಿಲ್ಲದೆ ಎರಡು ತಿಂಗಳು ಮನೆಯಲ್ಲಿದ್ದೆ. ಚಕ್ರವರ್ತಿ ಸಿನಿಮಾ ನಿರ್ಮಾಪಕ ಸಿದ್ಧಾಂತ್ ರೂಪದಲ್ಲಿ ಒಳ್ಳೆಯ ಸಹೋದರನನ್ನು ನೀಡಿದೆ ಎಂದು ವಿವರ ನೀಡಿದರು.
ನಿರ್ದೇಶಕ ಚಿಂತನ್,ಮೊದಲ ಚಿತ್ರ.ದರ್ಶನ್ ಸೇರಿ ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ.ವಿಭಿನ್ನ ಕಾಲಘಟ್ಟ ಚಿತ್ರೀಕರಣ ಮಾಡಿದ್ದೇವೆ ಸದ್ಯದಲ್ಲಿಯೇ
ತೆರೆಗೆ ತರಲಾಗುವುದು. ಇದು ಅಂಡರ್‌ವಲ್ಡ್ ಸಿನಿಮಾ. ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.
ನಟಿ ದೀಪಾ ಸನ್ನಿಧಿ,ಅಭಿನಯಕ್ಕೆ ಒತ್ತು ನೀಡುವ ಸಿನಿಮಾ ಇದು. ಸಾರಥಿ ಬಳಿಕ ದರ್ಶನ್ ಜೊತೆ ನಟಿಸಿದ್ದು ಒಳ್ಳೆಯ ಚಿತ್ರವಾಗಲಿದೆ ಎಂದು ಹೇಳಿಕೊಂಡರು.
ನಿರ್ಮಾಪಕ ಸಿದ್ಧಾಂತ್,ಚಿತ್ರದ ಆರಂಭ ಮತ್ತು ಮುಗಿದಿದ್ದುದೇ ಗೊತ್ತಾಗಲಿಲ್ಲ.

ಚಿತ್ರದ ಮೂಲಕ ದರ್ಶನ್ ಅಂತಹ ಸಹೋದರನ್ನು ನೀಡಿದೆ.ಇನ್ನಷ್ಟು ಉತ್ತಮ ಚಿತ್ರ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲ ಕೆಲವೇ ಕೆಲವು ನಟರಲ್ಲಿ ದರ್ಶನ್ ಮುಂಚೂಣಿಯಲ್ಲಿದ್ದಾರೆ. ಚಕ್ರವರ್ತಿ ಕನ್ನಡದಲ್ಲಿ ಹೊಸ ಟ್ರೆಂಡ್‌ಗೆ ಕಾರಣವಾಗಲಿದೆ ಎನ್ನುವ ಭವಿಷ್ಯ ನುಡಿದರು.

Leave a Comment