ಚಂದ್ರ ಪಥ ಸೇರಿದ ಚಂದ್ರಯಾನ – 2

ಬೆಂಗಳೂರು, ಆ. ೧೪- ಭಾರತದ ಮಹತ್ವಾಕಾಂಕ್ಷಿ ಚಂದ್ರಶೋಧನಾ ಯಾನವಾದ ಚಂದ್ರಯಾನಾ – 2ರ ಚಂದ್ರನೌಕೆ ಭೂ ಕಕ್ಷೆಯನ್ನು ಬಿಟ್ಟು ಚಂದ್ರನತ್ತ ಪ್ರಯಾಣ ಬೆಳೆಸಿದೆ.
ಜುಲೈ 22 ರಂದು ಉಡಾವಣೆಗೊಂಡು 23 ದಿನಗಳ ಕಾಲ ಭೂ ಕಕ್ಷೆಯಲ್ಲಿ ಸುತ್ತುತ್ತಿದ್ದ ನೌಕೆಯ ಕಕ್ಷೆಯನ್ನು ಇಂದು ಮುಂಜಾನೆ 2.21 ಗಂಟೆಯಲ್ಲಿ ಏರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹೇಳಿದೆ.
ಈ ಕಕ್ಷೆ ಏರಿಕೆಯನ್ನು ಫ್ರಾನ್ಸ್ ಲೂನಾರ್ ಇನ್‌ಸರ್‌ಟೈನ್ ಎಂದು ಕರೆಯಲಾಗುತ್ತದೆ. ನೌಕೆಯಲ್ಲಿಯ ದ್ರವೀಕೃತ ಇಂಜಿನ್‌ನನ್ನು 1,203 ಸೆಕೆಂಡ್‌ಗಳ ಕಾಲ ಉರಿಸುವ ಮೂಲಕ ನೌಕೆಯನ್ನು ಚಂದ್ರನ ಕಕ್ಷೆಗಳ ವಲಯಕ್ಕೆ ಸೇರಿಸಲಾಗಿದೆ. ಭೂ ಕಕ್ಷೆಯಲ್ಲಿದ್ದ ನೌಕೆಯ ಕಕ್ಷೆಯನ್ನು ಜುಲೈ 23 ರಿಂದ ಆಗಸ್ಟ್ 6ರವರೆಗೆ ಐದು ಬಾರಿ ಉನ್ನತೀಕರಿಸಲಾಗಿದೆ.
ಇಂದಿನ ಕಕ್ಷದ ಉನ್ನತೀಕರಣದೊಂದಿಗೆ ಇನ್ನು ನಾಲ್ಕು ಬಾರಿ ನೌಕೆಯ ಕಕ್ಷೆಯನ್ನು ವಿವಿಧ ಹಂತಗಳಿಗೆ ಏರಿಸಿದ ನಂತರ, ನೌಕೆ ಚಂದ್ರನ ಸುತ್ತಲಿನ ಅಂತಿಮ ಕಕ್ಷೆಗೆ ತಲುಪುತ್ತದೆ. ಹೀಗೆ ಅಂತಿಮ ಕಕ್ಷೆಗೆ ತಲುಪಿಸಲು ಮತ್ತೆ ದ್ರವೀಕೃತ ಇಂಜಿನ್‌ನನ್ನು ಉರಿಸಬೇಕಾಗುತ್ತದೆ. ಹೀಗೆ ಉರಿಸುವ ಮೂಲಕ ನೌಕೆಯನ್ನು ಆಗಸ್ಟ್ 20 ರಂದು ಚಂದ್ರನ ಹತ್ತಿರದ ಕಕ್ಷೆಗೆ ಸೇರಿಸಲಾಗುತ್ತದೆ. ಈ ಕಕ್ಷೆ ಚಂದ್ರನ ಮೇಲ್ಮೈಯಿಂದ ಕೇವಲ 100 ಕಿ.ಮೀಟರ್ ಅಂತರದಲ್ಲಿರುತ್ತದೆ.
ಈ ಕಕ್ಷೆಯಲ್ಲಿ ನೌಕೆ (ಆರ್ಬಿಟರ್) 13 ದಿನಗಳ ಕಾಲ ಸುತ್ತಿದ ನಂತರದಲ್ಲಿ ಇದರಲ್ಲಿರುವ ರೋವರ್ ಹೊತ್ತ ವಿಕ್ರಂ ಲ್ಯಾಂಡರ್, ಆರ್ಬಿಟರ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ಹೀಗೆ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್, ಸೆಪ್ಟೆಂಬರ್ 7 ರಂದು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಇಳಿಯುತ್ತದೆ. ಹೀಗೆ ಲ್ಯಾಂಡರ್ ಇಳಿದ ನಂತರದಲ್ಲಿ ಅದರಲ್ಲಿರುವ ಬ್ರಾಜ್ಞಾ ರೋವರ್ ನಿಧಾನವಾಗಿ ಹೊರಬರುತ್ತದೆ. ಮುಂದೆ ಅದು ಚಂದ್ರನ ಅಂಗಳದಲ್ಲಿ 500 ಮೀಟರ್ ಸಂಚರಿಸಿ, ಅಲ್ಲಿಯ ಚಿತ್ರಗಳು ಮತ್ತು ಮೇಲ್ಮೈ ಮಾಹಿತಿಯನ್ನು ರೋವರ್ ಮೂಲಕ ಆರ್ಬಿಟರ್‌ಗೆ ರವಾನಿಸುತ್ತದೆ.
ಆರ್ಬಿಟರ್‌ನಿಂದ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸುವ 15 ನಿಮಿಷಗಳ ಕಾಲ ಅತ್ಯಂತ ಕ್ಲಿಷ್ಟಕರವಾದದ್ದು ಎಂದಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್, ಸಂಪೂರ್ಣ ಚಂದ್ರನೌಕೆ ಎಲ್ಲಾ ಕಾರ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಲ್ಯಾಂಡರ್ ಅನ್ನು ಸುರಕ್ಷಿತವಾಗಿ ದಕ್ಷಿಣ ಧ್ರುವದಲ್ಲಿ ಇಳಿಸಲಾಗುತ್ತದೆ. ಆ ಮೂಲಕ ಚಂದ್ರನ ಅಂಗಳದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ ಎಂದೂ ಶಿವನ್ ಹೇಳಿದ್ದಾರೆ.

Leave a Comment