ಚಂದ್ರನ ಮಣ್ಣು ಭೂಮಿಗೆ ತರಲು ಚೀನಾ ಯಾನ

ಚಂದ್ರನ ಮೇಲ್ಮೈ ಅಗೆದು ಅದರಲ್ಲಿಯ ಮಣ್ಣಿನ ಮಾದರಿಯನ್ನು ಭೂಮಿಗೆ ತಂದು ಪರೀಕ್ಷಿಸಲು ಚೀನಾ ಬಾಹ್ಯಾಕಾಶ ನೌಕೆಯನ್ನು ಈ ವರ್ಷಾಂತ್ಯದೊಳಗೆ ಚಂದ್ರನಲ್ಲಿಗೆ ಕಳುಹಿಸಲು ಸಿದ್ಧತೆ ನಡೆಸಿದೆ.

ಚಂದ್ರನಲ್ಲಿಯ ಮಣ್ಣನ್ನು ಭೂಮಿಗೆ ತರುವ ತನ್ನ ಮಹತ್ವಾಕಾಂಕ್ಷಿ ಯೋಜನೆ ಅಡಿಯಲ್ಲಿ ಚೀನಾ ಇದೇ ವರ್ಷ ಚಾಂಗೆ – 5 ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸುತ್ತಿದೆ.

ಚಂದ್ರನ ಮೇಲ್ಮೈ ಮೇಲೆ ಇಳಿಯುವ ಈ ನೌಕೆಯ ಲ್ಯಾಂಡರ್ 2 ಮೀಟರ್ ಆಳದವರೆಗೆ ಅಗೆದು ಮಣ್ಣನ್ನು ಸಂಗ್ರಹಿಸುತ್ತದೆ.

ಈ ನೌಕೆಯಲ್ಲಿ ಆರ್ಬಿಟರ್, ರಿಟರ್ನಿಂಗ್, ಆರ್ಬಿಟರ್ ಆಕ್ಸೆಂಡರ್ ಮತ್ತು ಲ್ಯಾಂಡರ್ ನಾಲ್ಕು ಭಾಗಗಳಿದ್ದು, ಲ್ಯಾಂಡರ್ ಮಣ್ಣನ್ನು ಅಗೆಯುತ್ತದೆ.

ಮಣ್ಣಿನ ಮಾದರಿಯನ್ನು ರಿಟರ್ನಿಂಗ್ ಆರ್ಬಿಟರ್ ಭೂಮಿಗೆ ತರುತ್ತದೆ ಎಂದು ಈ ಯಾನದ ಯೋಜನಾ ವಿಜ್ಞಾನಿಗಳು ಹೇಳಿದ್ದಾರೆ.

ತನ್ನ ಮುಂದಿನ ಯಾನ ಕುರಿತಂತೆ ಚೀನಾ ಮಾರ್ಚ್ 7 ರಂದು ಘೋಷಣೆ ಮಾಡಿದೆ. ಅದರಂತೆ ಚಾಂಗೆ – 5 ಹೆಸರಿನ ಬಾಹ್ಯಾಕಾಶ ನೌಕೆಯನ್ನು ಇದೇ ವರ್ಷ ನವೆಂಬರ್‌ನಲ್ಲಿ ಚಂದ್ರನಲ್ಲಿಗೆ ಉಡಾವಣೆ ಮಾಡುತ್ತಿದೆ. ಈ ಉಡಾವಣೆಯ ಅಂತಿಮ ಸಿದ್ಧತೆ ನಡೆಯುತ್ತಿದ್ದು, ಆಗಸ್ಟ್ ವೇಳೆಗೆ ನೌಕೆ ಉಡಾವಣಾ ಕಾರ್ಯ ಮುಗಿಯಲಿದ್ದು, ನೌಕೆ ಉಡಾವಣೆಗೆ ಸಿದ್ಧವಾಗುತ್ತಿದೆ ಎಂದು ಚೀನಾದ ಚಂದ್ರ ಶೋಧನಾ ಯೋಜನೆಯ ಅಧಿಕಾರಿ ಹುವ್ಹಾ ಹೇಳಿದ್ದಾರೆ.

ಚೀನಾದ ಮೊದಲ ಯಾನ   

ಚಂದ್ರನಲ್ಲಿಗೆ ಕಳುಹಿಸುವ ನೌಕೆಯನ್ನು ಮತ್ತೆ ಭೂಮಿಗೆ ಮರಳುವ ಈ ಯಾನ ಚೀನಾದ ಮೊದಲ ಯಾನವಾಗಿದೆ. ಚಾಂಗೆ – 5 ಸಹಿತ 8,200 ಕೆ.ಜಿ. ತೂಕದ ಭಾರವನ್ನು ಹೊತ್ತ ಲಾಂಗ್ ಮಾರ್ಚ್ – 5 ರಾಕೆಟ್, ಚೀನಾದ ಹೈನಾ ದ್ವೀಪದಲ್ಲಿರುವ ವೆನ್ ಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ನವೆಂಬರ್‌ನಲ್ಲಿ ಹಾರಲಿದೆ.

ಭೂಮಿಯಿಂದ 3.80 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನನ್ನು ಮುಟ್ಟುವ ಚಾಂಗೆ – 5 ಬಾಹ್ಯಾಕಾಶ ನೌಕೆ ಸೆಕೆಂಡ್ ವೆಲಾಸಿಟಿ ವೇಗದಲ್ಲಿ ಸಾಗಲಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಚಂದ್ರನ ಮಾದರಿ ಸಂಗ್ರಹ

ಚಾಂಗೆ – 5 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿದು 2 ಮೀಟರ್ ಆಳದವರೆಗೆ ಅಗೆದು ಅಲ್ಲಿಯ 2 ಕೆಜಿಯಷ್ಟು ಮಣ್ಣನ್ನು ಸಂಗ್ರಹಿಸಿಕೊಂಡು ಅದನ್ನು ಭೂಮಿಗೆ ತರುವುದು ಈ ಯಾನದ ಮುಖ್ಯಗುರಿ. ಆದರೆ ಈ ಯಾನದಲ್ಲಿಯ ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ ಎಂದರೆ ಚಂದ್ರನಲ್ಲಿ ಮಾದರಿ ಸಂಗ್ರಹಿಸಿದ ನಂತರ ಚಂದ್ರನ ಮೇಲ್ಮೈಯಿಂದ ನೌಕೆ ಭೂಮಿಗೆ ಬರಲು ಮೇಲೇಳುವ ಮತ್ತು ಭೂಮಿಗೆ ವಾಪಸ್ಸು ಬರುವಾಗ ಭೂ ವಾತಾವರಣ ಮರುಪ್ರವೇಶ ಪಡೆಯುವುದು ಎಂದು ಚೀನಾದ ಚಂದ್ರ ಶೋಧನಾ ಯಾನದ ಯೋಜನಾ ಅಧಿಕಾರಿ ಹುವ್ಹಾ ಹೇಳಿದ್ದಾರೆ.

ಚಾಂಗೆ – 5 ನೌಕೆ ಚಂದ್ರನ ಮೇಲ್ಮೈ ಮೇಲೆ ನಿಧಾನವಾಗಿ ಇಳಿದ ನಂತರ ಅದರಲ್ಲಿಯ ಲ್ಯಾಂಡರ್ ಯಂತ್ರ ಮಣ್ಣನ್ನು ಅಗೆಯುತ್ತದೆ. ಸಂಗ್ರಹಿಸಿದ ಮಾದರಿಯ ಮಣ್ಣನ್ನು ಅದೇ ನೌಕೆಯಲ್ಲಿಯ ಅಸೆಂಡರ್‌ನಲ್ಲಿರುವ ಪಾತ್ರೆಗೆ ಸುರಿಯುತ್ತದೆ.

ಇದನ್ನು ಅಸೆಂಡರ್‌ನಿಂದ ಆರ್ಬಿಟರ್ ಮತ್ತು ರಿಟರ್ನಿಂಗ್ ಆರ್ಬಟರ್‌ಗೆ ವರ್ಗಾಯಿಸಲಾಗುತ್ತದೆ. ಆರ್ಬಟರ್ ಮತ್ತು ರಿಟರ್ನಿಂಗ್ ಆರ್ಬಟರ್ ಭೂಮಿಯತ್ತ ಪ್ರಯಾಣಿಸಲು ಸ್ವಯಂ ಚಾಲಿತವಾಗಿ ಸಿದ್ಧಗೊಳ್ಳುತ್ತವೆ. ಭೂಮಿಗೆ ಮರಳುವಾಗ, ಭೂಮಿಯಿಂದ ಸಾವಿರಾರು ಕಿ.ಮೀ. ದೂರ ಇರುವಾಗಲೇ ಆರ್ಬಟರ್, ರಿಟರ್ನಿಂಗ್ ಆರ್ಬಟರ್ ಪ್ರತ್ಯೇಕಗೊಳ್ಳುತ್ತವೆ. ರಿಟರ್ನಿಂಗ್ ಆರ್ಬಟರ್ ಮಾತ್ರ ಭೂ ವಾತಾವರಣವನ್ನು ಪ್ರವೇಶಿಸುತ್ತದೆ ಎಂದು ಈ ಯಾನದ ಮೂಲಗಳು ತಿಳಿಸಿವೆ.

-ಉತ್ತನೂರು ವೆಂಕಟೇಶ್

Leave a Comment