ಚಂದ್ರನ ದಕ್ಷಿಣಧೃವದಲ್ಲಿ ಚೀನಾ ಪ್ರಯೋಗಾಲಯ

  • ಉತ್ತನೂರು ವೆಂಕಟೇಶ್

ಚಂದ್ರನ ದಕ್ಷಿಣ ಧೃವದಲ್ಲಿ  ವೈಜ್ಞಾನಿಕ ಸಂಶೋಧನಾ ನಿಲ್ದಾಣವನ್ನು ನಿರ್ಮಾಣ ಮಾಡುವ ಸಿದ್ಧತೆಯಲ್ಲಿ ಚೀನಾ ತೊಡಗಿದೆ. ಇದೇ ವರ್ಷ ಮೊದಲ ಭಾಗದಲ್ಲಿ  ಚೀನಾ ತನ್ನ ತನ್ನ ಮಾನವರಹಿತ ಬಾಹ್ಯಾಕಾಶ ನೌಕೆ ಚಾಂಗ್-೪ ಅನ್ನು ಚಂದ್ರನ ಇನ್ನೊಂದು ಬದಿಯಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿತ್ತು. ಆ ಮೂಲಕ ಚಂದ್ರನ ಕಾಣದ ಇನ್ನೊಂದು ಬದಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹಿರಿಮೆ ತನ್ನದಾಗಿಸಿಕೊಂಡಿತ್ತು.

  • ಬಾಹ್ಯಾಕಾಶ ಸಂಶೋಧನೆಯಲ್ಲಿ ಅಮೆರಿಕಾವನ್ನು ಸರಿ ಗಟ್ಟುವುದು ಹಾಗೂ ಅದನ್ನು ಮೀರಿಸುವ ಉದ್ದೇಶ  ಚೀನಾ ಹೊಂದಿದೆ.
  • ಇದರ ಭಾಗವಾಗಿಯೇ ಚೀನಾ ಮಾನವ ರಹಿತ ವೈಜ್ಞಾನಿಕ ಸಂಶೋಧನಾ ನಿಲ್ದಾಣವನ್ನು ಚಂದ್ರನ ದಕ್ಷಿಣ ಧೃವದಲ್ಲಿ ಇಳಿಸುವ ಸಿದ್ಧತೆಯಲ್ಲಿದೆ.
  • ಹಾಗೆಯೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು  ಹೊಂದುವ ಯೋಜನಾ ಹಾದಿಯಲ್ಲಿ ಸಾಗಿದೆ.
  • ಇದಕ್ಕಾಗಿ ಅದು ಈಗಾಗಲೇ ಟಿಯಾನ್ ಗಾಂಗ್–೧ ಮತ್ತು ಟಿಯಾನ್ ಗಾಂಗ್-೨ ಪ್ರಯೋಗಾಲಯಗಳನ್ನು  ಉಡಾವಣೆ ಮಾಡಿದೆ.
  • ಟಿಯಾನ್ ಗಾಂಗ್-೩ ಉಡಾವಣೆ ಯೋಜನೆಯ ಸಿದ್ಧತೆಯಲ್ಲಿದೆ. ಅದರೊಂದಿಗೆ ಪೂರ್ಣ ಪ್ರಮಾಣದ  ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಚೀನಾದ ಮಹದಾಸೆ.

ಈಗ ಅಂತಹುದೇ ಮತ್ತೊಂದು ಸಾಧನೆಯ ಸಿದ್ಧತೆಯಲ್ಲಿ ತೊಡಗಿರುವ ಚೀನಾ, ಅತಿಯಾದ ಪ್ರತಿಕೂಲ ವಾತಾವರಣವಿರುವ  ಚಂದ್ರನ ದಕ್ಷಿಣ ಧೃವದಲ್ಲಿ ಪ್ರಯೋಗಾಲಯವನ್ನು ನೆಲೆಗೊಳಿಸುವ ಕಾರ್ಯವನ್ನು ಕೈಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಶೋಧನಾ ಆಡಳಿತ (ಸಿಎಸ್ಎನ್ಎ) ಮುಖ್ಯಸ್ಥ ಝಾಂಗ್ ಕೆಗಿಯನ್ ಹೇಳಿದ್ದಾರೆ.

5vichara1

ಬಾಹ್ಯಾಕಾಶ ಶೋಧನೆಯಲ್ಲಿ ಅಮೇರಿಕಾವನ್ನು ಮೀರಿಸುವ ಹಂಬಲದಲ್ಲಿ ಬಾಹ್ಯಾಕಾಶ ಶೋಧನೆಯಲ್ಲಿ ತೊಡಗಿರುವ ಚೀನಾ ಈಗಾಗಲೇ ಅಮೇರಿಕಾದ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರತಿಯಾಗಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಾಣ ಮಾಡಿಕೊಳ್ಳುವ ಹಾದಿಯಲ್ಲಿದೆ. ಈ ಯೋಜನೆಯ ಮೊದಲ ಭಾಗವಾಗಿ  ಚೀನಾ  ೨೦೧೧ರ ಸೆಪ್ಟಂರ್ ೨೯ರಲ್ಲಿ  ಟಿಯಾನ್ ಗಾಂಗ್-೧  ಬಾಹ್ಯಾಕಾಶ ಪ್ರಯೋಗಾಲಯವನ್ನು ಮತ್ತು ೨೦೧೬  ಸೆಪ್ಟೆಂಬರ್ ೧೫ ರಂದು ಟಿಯಾನ್ ಗಾಂಗ್-೨ ಉಡಾವಣೆ ಮಾಡಿತ್ತು.

ಟಿಯಾನ್ ಗಾಂಗ್-೧ ರೊಂದಿಗೆ ಟಿಯಾನ್ ಗಾಂಗ್-೨ ಅನ್ನು ಜೋಡಣೆ ಮಾಡಲಾಗಿದ್ದು. ಇದರಲ್ಲಿ ಚೀನಾದ ವಿಜ್ಞಾನಿಗಳು ೩೦ ದಿನಗಳ ಕಾಲ ವೈಜ್ಞಾನಿಕ ಶೋಧನೆ ನಡೆಸಿ ಭೂಮಿಗೆ ವಾಪಸ್ ಆಗಿದ್ದರು.

ಇದರೊಂದಿಗೆ ಜೋಡಿಸಲು ಮತ್ತು ಬಾಹ್ಯಾಕಾಶದಲ್ಲಿ ತನ್ನದೇ ಆದ ಪೂರ್ಣ ಪ್ರಮಾಣದ ಬಾಹ್ಯಾಕಾಶ ನಿಲ್ದಾಣವನ್ನು  ಹೊಂದಲು, ೩ನೇ ಪ್ರಯೋಗಾಲಯ ವಾದ ಟಿಯಾನ್ ಗಾಂಗ್-೩ ಅನ್ನು ಉಡಾವಣೆ ಮಾಡುವ  ಯೋಜನೆಯಲ್ಲಿ  ಚೀನಾ ತೊಡಗಿದೆ.

ಈಗಾಗಲೇ ಬಾಹ್ಯಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಟಿಯಾನ್ ಗಾಂಗ್-೧ ಮತ್ತು ೨ರ ಜೋಡಣೆ ಯೊಂದಿಗೆ ಟಿಯಾರ್ನ ಗಾಂಗ್ -೩ರ ಜೋಡಣೆ ಮಾಡುವ ಮೂಲಕ  ಅನ್ಯ ದೇಶಗಳ ಹಂಗಿಲ್ಲದೆ ತನ್ನದೇ ಬಾಹ್ಯಾಕಾಶ ನಿಲ್ದಾಣ ಹೊಂದುವುದೇ ಈ ಯೋಜನೆ ಹಿಂದಿನ ಚೀನಾ ಉದ್ದೇಶ.

Leave a Comment